ಮಂಗಳೂರು: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್ಜೆಇಸಿ), ಮಂಗಳೂರು, ತನ್ನ ಸಂಸ್ಥೆಯ ಅಭಿವೃದ್ಧಿಯ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಖಲಿಸಿತು. ಕಾಲೇಜಿನ ಉದ್ದೇಶಿತ ಎಸ್ಜೆಇಸಿ ಇನ್ನೋವೇಶನ್ ಸೆಂಟರ್ ಹಾಗೂ ಸೇಂಟ್ ಕಾರ್ಲೊ ಬ್ಲಾಕ್ (ಪುರುಷರ ವಸತಿನಿಲಯ) ಕಟ್ಟಡಗಳ ಶಿಲಾನ್ಯಾಸ ಮತ್ತು ಶಿಲಾಸ್ಥಾಪನಾ ಸಮಾರಂಭವು ಶನಿವಾರ, ನವೆಂಬರ್ 14, 2026 ರಂದು ನೆರವೇರಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಎಸ್ಜೆಇಸಿಯ ಅಧ್ಯಕ್ಷರಾದ ಪರಮಪೂಜ್ಯ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಶಿಲಾನ್ಯಾಸ ನೆರವೇರಿಸಿ ಆಶೀರ್ವದಿಸಿದರು. ಎನ್ಆರ್ಐ ಉದ್ಯಮಿ, ಸಮಾಜಸೇವಕ ಹಾಗೂ ದಾನಿಗಳಾದ ಶ್ರೀ ಮೈಕಲ್ ಡಿ’ಸೋಜಾ ಅವರು ಶಿಲಾಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಧರ್ಮಗುರುಗಳು, ಧರ್ಮಭಗಿನಿಯರು, ಆಡಳಿತ ಮಂಡಳಿಯ ಸದಸ್ಯರು, ಡೀನ್ಗಳು, ವಿಭಾಗ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಶ್ರೀ ಮೈಕಲ್ ಡಿ’ಸೋಜಾ ಅವರ ಸಲಹೆಗಾರರು ಮತ್ತು ಸಹವರ್ತಿಗಳು ಹಾಗೂ ಯೋಜನೆಗಳಿಗೆ ಸಂಬಂಧಿಸಿದ ವಾಸ್ತುಶಿಲ್ಪಿಗಳು, ಇಂಜಿನಿಯರ್ಗಳು ಮತ್ತು ನಿರ್ಮಾಣ ತಂಡದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮೊದಲ ಸಮಾರಂಭವು ಉದ್ದೇಶಿತ ಎಸ್ಜೆಇಸಿ ಇನ್ನೋವೇಶನ್ ಸೆಂಟರ್ನ ಸ್ಥಳದಲ್ಲಿ ನಡೆಯಿತು. ನಾವೀನ್ಯತೆ, ಸಂಶೋಧನೆ, ಉದ್ಯಮಶೀಲತೆ ಮತ್ತು ಕೈಗಾರಿಕಾ ಸಹಯೋಗಕ್ಕೆ ಮೀಸಲಾದ ಮಹತ್ವದ ಕೇಂದ್ರವಾಗಿ ಈ ಕಟ್ಟಡವನ್ನು ರೂಪಿಸಲಾಗುತ್ತಿದೆ. ಸುಮಾರು 1.4 ಲಕ್ಷ ಚದರ ಅಡಿ ವಿಸ್ತೀರ್ಣದ ಬಹುಮಹಡಿ ಕಟ್ಟಡದಲ್ಲಿ ವಿದ್ಯಾರ್ಥಿ ಸಂಘಟನೆಗಳು, ಕಾರ್ಯಾಗಾರಗಳು, ಐಡಿಯೇಷನ್ ಕೇಂದ್ರಗಳು, ಮೇಕರ್ಸ್ಪೇಸ್ಗಳು, ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಸಂಶೋಧನಾ ಸೌಲಭ್ಯಗಳು, ಸ್ಟಾರ್ಟ್ಅಪ್ ಕೇಂದ್ರಗಳು ಹಾಗೂ ಸಭಾಂಗಣವನ್ನು ಹೊಂದುವ ಯೋಜನೆಯಿದೆ. ಅಂತರ್ಶಿಸ್ತೀಯ ಕಲಿಕೆ, ಸೃಜನಶೀಲತೆ, ತಾಂತ್ರಿಕ ಪ್ರಗತಿ ಹಾಗೂ ಶೈಕ್ಷಣಿಕ ಮತ್ತು ಕೈಗಾರಿಕಾ ವಲಯಗಳ ನಡುವಿನ ಅರ್ಥಪೂರ್ಣ ಸಹಯೋಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕೇಂದ್ರವನ್ನು ರೂಪಿಸಲಾಗುತ್ತಿದೆ.
ಎರಡನೇ ಸಮಾರಂಭವು ಕಾಲೇಜಿನ ನೂತನ ಪುರುಷರ ವಸತಿನಿಲಯವಾದ ಉದ್ದೇಶಿತ ಸೇಂಟ್ ಕಾರ್ಲೊ ಬ್ಲಾಕ್ನ ಸ್ಥಳದಲ್ಲಿ ನಡೆಯಿತು. ಆರು ಅಂತಸ್ತುಗಳನ್ನು ಹೊಂದಲಿರುವ ಈ ಕಟ್ಟಡವು ಸುಮಾರು 400 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ವಿದ್ಯಾರ್ಥಿಗಳಿಗೆ ಆರಾಮದಾಯಕ, ಸುರಕ್ಷಿತ ಹಾಗೂ ಸಹಕಾರಯುತ ವಾತಾವರಣವನ್ನು ಒದಗಿಸುವ ಉದ್ದೇಶದಿಂದ ಈ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.
ದೈವಭಕ್ತಿ ಹಾಗೂ ಡಿಜಿಟಲ್ ತಂತ್ರಜ್ಞಾನದ ಮೂಲಕ ತಮ್ಮ ನಂಬಿಕೆಯನ್ನು ಹಂಚಿಕೊಂಡ ಯುವ ಇಟಾಲಿಯನ್ ಸಂತ ಕಾರ್ಲೊ ಅಕುಟಿಸ್ ಅವರ ಹೆಸರನ್ನು ಈ ವಸತಿನಿಲಯಕ್ಕೆ ಇಡಲಾಗಿದೆ. ನಂಬಿಕೆ, ಕರುಣೆ, ಜ್ಞಾನ ಮತ್ತು ಸೇವೆಯ ಸಂದೇಶವನ್ನು ಈ ಕಟ್ಟಡವು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳಿಗೆ ಮನೆಯಿಂದ ದೂರವಿದ್ದರೂ ಮನೆಯ ಅನುಭವವನ್ನು ನೀಡುವುದರ ಜೊತೆಗೆ, ಪರಸ್ಪರ ಬಾಂಧವ್ಯ, ಸ್ವಾವಲಂಬನೆ ಮತ್ತು ಸಮುದಾಯ ಮನೋಭಾವವನ್ನು ಬೆಳೆಸುವ ಕೇಂದ್ರವಾಗಿ ಇದು ರೂಪುಗೊಳ್ಳಲಿದೆ.
ಈ ಎರಡೂ ಯೋಜನೆಗಳಿಗೆ ದೇವರ ಆಶೀರ್ವಾದವನ್ನು ಕರುಣಿಸಿದ ಪರಮಪೂಜ್ಯ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಹಾಗೂ ತಮ್ಮ ಉದಾರ ಸಹಕಾರ ಮತ್ತು ಬದ್ಧತೆಯ ಮೂಲಕ ಕೊಡುಗೆ ನೀಡಿದ ಶ್ರೀ ಮೈಕಲ್ ಡಿಸೋಜ ಅವರಿಗೆ ಸಂಸ್ಥೆಯು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿತು. ಅಲ್ಲದೆ, ಸಂಸ್ಥೆಯ ನಿರ್ದೇಶಕರಾದ ವಂ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ, ಸಹಾಯಕ ನಿರ್ದೇಶಕರಾದ ವಂ. ಫಾ. ಕೆನ್ನೆತ್ ರೇನರ್ ಕ್ರಾಸ್ತಾ, ಪ್ರಾಂಶುಪಾಲರಾದ ಡಾ. ರಿಯೋ ಡಿ’ಸೋಜಾ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಈ ಯೋಜನೆಗಳ ಪರಿಕಲ್ಪನೆ ಮತ್ತು ಅನುಷ್ಠಾನದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.
ಈ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ತಮ್ಮ ಪರಿಣತಿ ಮತ್ತು ಶ್ರಮವನ್ನು ಸಮರ್ಪಿಸಿದ ವಾಸ್ತುಶಿಲ್ಪಿಗಳು, ಸಲಹೆಗಾರರು, ಇಂಜಿನಿಯರ್ಗಳು, ಗುತ್ತಿಗೆದಾರರು ಹಾಗೂ ಯೋಜನಾ ತಂಡದ ಸದಸ್ಯರ ಕೊಡುಗೆಯನ್ನು ವಿಶೇಷವಾಗಿ ಶ್ಲಾಘಿಸಲಾಯಿತು. ಈ ಎರಡು ಯೋಜನೆಗಳು ಸಂಸ್ಥೆಯ ಮೂಲಸೌಕರ್ಯಕ್ಕೆ ಮಹತ್ವದ ಸೇರ್ಪಡೆಯಾಗಿದ್ದು, ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಅನುಭವವನ್ನು ಉತ್ತಮಗೊಳಿಸುವ ಎಸ್ಜೆಇಸಿಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.










