ಮಂಗಳೂರು: ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಸ್ವಾಯತ್ತ) 2026ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರದಾನ ಸಮಾರಂಭವು ಕಾಲೇಜಿನ ಕಲಾಂ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದಲ್ಲಿ 120 ಎಂಬಿಎ, 120 ಎಂಸಿಎ ಹಾಗೂ 3 ಎಂಬಿಎ (ಐಇವಿ) ಸೇರಿದಂತೆ ಒಟ್ಟು 243 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು.

ಎನ್‌ಆರ್‌ಐ ಉದ್ಯಮಿ ಹಾಗೂ ಸಮಾಜಸೇವಕ ಮೈಕೆಲ್ ಡಿಸೋಜ ಮುಖ್ಯ ಅತಿಥಿಗಳಾಗಿ, ಸ್ವಿಂಕ್‌ಪೇ ಫಿನ್‌ಟೆಕ್ ಪ್ರೈವೇಟ್ ಲಿಮಿಟೆಡ್‌ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಹಿತೇಶ್ ಎನ್. ಕಾಮತ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಎಸ್‌ಜೆಇಸಿ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ್ಹಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಗೌರವ ಅತಿಥಿ ಹಿತೇಶ್ ಎನ್. ಕಾಮತ್ ಅವರು ಮಾತನಾಡಿ, ಶೈಕ್ಷಣಿಕ ಅಂಕಗಳು ಉದ್ಯೋಗ ಪಡೆಯಲು ಸಹಕಾರಿಯಾಗಿದ್ದರೂ, ಪರಿಶ್ರಮ, ಬದ್ಧತೆ ಮತ್ತು ನಿರಂತರ ಪ್ರಯತ್ನಗಳೇ ಯಶಸ್ಸಿನ ನಿಜವಾದ ಮೆಟ್ಟಿಲುಗಳಾಗಿವೆ ಎಂದು ಹೇಳಿದರು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅವಲಂಬಿಸುವ ಬದಲು, ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸ್ವತಂತ್ರವಾಗಿ ಆಲೋಚಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಪದವೀಧರರಿಗೆ ಕರೆ ನೀಡಿದರು.

ಮುಖ್ಯ ಅತಿಥಿ ಮೈಕೆಲ್ ಡಿಸೋಜ ಅವರು ಪದವೀಧರರನ್ನು ಅಭಿನಂದಿಸಿ, ಜೀವನದಲ್ಲಿ ವಿನಯ, ತಾಳ್ಮೆ ಮತ್ತು ದೃಢಸಂಕಲ್ಪದೊಂದಿಗೆ ಮುನ್ನಡೆಯುವಂತೆ ಸಲಹೆ ನೀಡಿದರು. ಪದವಿ ಎಂಬುದು ವೃತ್ತಿಜೀವನದ ಆರಂಭವಷ್ಟೇ ಆಗಿದ್ದು, ವ್ಯಕ್ತಿತ್ವ ಮತ್ತು ಸಕಾರಾತ್ಮಕ ಮನೋಭಾವವೇ ಭವಿಷ್ಯವನ್ನು ರೂಪಿಸುತ್ತವೆ ಎಂದು ತಿಳಿಸಿದರು. ವಿಫಲತೆಗಳಿಂದ ಪಾಠ ಕಲಿಯುವ ಹಾಗೂ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳುವ ಮಹತ್ವವನ್ನು ಅವರು ವಿವರಿಸಿದರು.

ಬಳಿಕ ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಿಯೋ ಡಿ’ಸೋಜಾ ಅವರು ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ಸಮಾರಂಭದಲ್ಲಿ ವಂ. ಫಾ. ಕೆನ್ನೆತ್ ಆರ್. ಕ್ರಾಸ್ತಾ, ಸಹಾಯಕ ನಿರ್ದೇಶಕರು, ವಿವಿಧ ಡೀನ್‌ಗಳು, ವಿಭಾಗಗಳ ಮುಖ್ಯಸ್ಥರು, ಸಂಚಾಲಕರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕಿ ಡಾ. ಸುಮಂಗಲಾ ಎನ್. ವಂದಿಸಿದರು. ಅನಂತ್ ರೋಹಿತ್ ಭಟ್ ಹಾಗೂ ಐಶ್ವರ್ಯ ಆರ್. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.