ಮಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವಾರದ ಕಾಲ ನಾಡಹಬ್ಬವನ್ನು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ಆಚರಿಸಲಾಯಿತು.

“ಕನ್ನಡ ಬೆಳಸೋಣ – ಕನ್ನಡ ಉಳಿಸೋಣ” ಎಂಬ ಧ್ಯೇಯವಾಕ್ಯದಡಿ ನವೆಂಬರ್ 1ರಿಂದ 7ರವರೆಗೆ ನಡೆದ ರಾಜ್ಯೋತ್ಸವ ವಾರದಲ್ಲಿ ವಿದ್ಯಾರ್ಥಿಗಳು ನೃತ್ಯ, ನಾಟಕ, ಕವನ ವಾಚನ, ಕಾದಂಬರಿ ವಾಚನ, ವಾದ–ವಿವಾದ, ಕನ್ನಡ ರಸಪ್ರಶ್ನೆ, ಚಿತ್ರಕಲೆ ಮತ್ತು ಜನಪದ ಗೀತೆಗಳಂತಹ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹಭರಿತವಾಗಿ ಭಾಗವಹಿಸಿದರು. ಕಾಲೇಜು ಪ್ರಾಂಗಣವನ್ನು ಕೆಂಪು–ಹಳದಿ ಬಣ್ಣದ ಧ್ವಜಗಳು ಮತ್ತು ಅಲಂಕಾರಗಳಿಂದ ಸಿಂಗಾರಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ರಾಘವೇಂದ್ರ ಶಣೈ ಅವರು ಮಾತನಾಡಿ, “ಕನ್ನಡ ನಮ್ಮ ಅಸ್ತಿತ್ವದ ಗುರುತು. ಭಾಷೆಯನ್ನು ಪ್ರೀತಿಸಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಯುವ ಪೀಳಿಗೆಯವರು ಕನ್ನಡದ ಬೆಳವಣಿಗೆಗೆ ಶ್ರಮಿಸಬೇಕು” ಎಂದು ತಮ್ಮ ಸಂದೇಶವನ್ನು ನೀಡಿದರು. ಅವರು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.

ಈ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಕನ್ನಡ ವಿಭಾಗದ ಉಪನ್ಯಾಸಕರು, ಸಂಯೋಜಕರು ಹಾಗೂ ವಿದ್ಯಾರ್ಥಿ ಸಂಘದ ಸದಸ್ಯರು ಮಹತ್ತರ ಪಾತ್ರವಹಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ರಾಜ್ಯೋತ್ಸವ ವಾರವು ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿ, ಸಂಸ್ಕೃತಿ ಅರಿವು ಮತ್ತು ರಾಜ್ಯಭಿಮಾನವನ್ನು ಮತ್ತಷ್ಟು ಬಲಪಡಿಸಿತು.

