ಮಂಗಳೂರು : ಶಕ್ತಿನಗರದ ಸಾನಿಧ್ಯ ಸಂಸ್ಥೆಯಲ್ಲಿ ಆಟಿಸಂನಿಂದ ಬಳಲುತ್ತಿರುವ ಮಕ್ಕಳಿಗಾಗಿ ಹಾಗೂ ನಿರ್ದಿಷ್ಟ ಕಲಿಕೆಯ ಸಮಸ್ಯೆ ಹೊಂದಿರುವ ಮಕ್ಕಳಿಗಾಗಿ ಅರ್ಜುನ್ ಶೆಟ್ಟಿ ಸ್ಮರಣಾರ್ಥ ಶಾಲೆಯ ಉದ್ಘಾಟನೆ ಆ.8ರಂದು ಆಯೋಜಿಸಲಾಗಿದೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅರ್ಜುನ್ ಶೆಟ್ಟಿ ಫೌಂಡೇಶನ್ ನ ಸ್ಥಾಪಕ ಸಿಎ ಸುಧೀ‌ರ್ ಶೆಟ್ಟಿ, ತಮ್ಮ ಮಗನ ನೆನಪಿಗಾಗಿ ಈ ಶಾಲೆಯನ್ನು ಆರಂಭಿಸುತ್ತಿದ್ದು, ಇಲ್ಲಿ ಈ ಮಕ್ಕಳಿಗೆ ಅಗತ್ಯವಿರುವ ಥೆರಪಿಯ ಜೊತೆಗೆ ರಾಜ್ಯ ಮತ್ತು ರಾಷ್ಟ್ರ ಮುಕ್ತ ಶಾಲೆಯ ನೆರವಿನೊಂದಿಗೆ ಪದವಿ ಪೂರ್ವ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಬೆಳಗ್ಗೆ 9:20ಕ್ಕೆ ಶಾಲೆಯ ಉದ್ಘಾಟನೆ ನಡೆಯಲಿದ್ದು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಉದ್ಘಾಟನೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೆರವೇರಿಸಲಿದ್ದಾರೆ. ಸ್ಥಳೀಯ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಎರಡು ಮಕ್ಕಳು ಮತ್ತು ಓರ್ವ ಶಿಕ್ಷಕಿಯೊಂದಿಗೆ 2003ರಲ್ಲಿ ಆರಂಭಗೊಂಡ ಸಂಸ್ಥೆಯು ಪ್ರಸಕ್ತ 211 ಭಿನ್ನ ಸಾಮರ್ಥ್ಯದವರಿಗೆ ವಿಶೇಷ ಶಿಕ್ಷಣ ಮತ್ತು ತರಬೇತಿ ಒದಗಿಸುತ್ತಿದೆ. ಸುಮಾರು 75 ಮಂದಿ ವಿಶೇಷ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿಶೇಷ ತಜ್ಞರು, ಮನಶಾಸ್ತ್ರಜ್ಞರು ಹಾಗೂ ಪರಿಚಾರಿಕೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

2024ರಲ್ಲಿ ಸರಕಾರವು ವಿಶೇಷ ಶಾಲೆಗಳಿಗೆ ನೀಡುವ ಅನುದಾನವನ್ನು ಹೆಚ್ಚಿಸಿದೆ. ಆದರೆ ಕಳೆದ ನಾಲ್ಕು ತಿಂಗಳಿನಿಂದ ಈ ಅನುದಾನ ಬಂದಿಲ್ಲ. ಶಿಕ್ಷಕರಿಗೆ 20,250 ರೂ. ಹಾಗೂ ಶಿಕ್ಷಕೇತರ ಸಿಬ್ಬಂದಿಗೆ 13000, ವಾಚ್ ಮೆನ್ ಗೆ 9,000 ರೂ. ವೇತನವನ್ನು ಒದಗಿಸಲಾಗುತ್ತಿದೆ. ಆದರೆ ಇಷ್ಟು ಕಡಿಮೆ ವೇತನಕ್ಕೆ ಆಸಕ್ತಿ ಇಲ್ಲದ ಕಾರಣ ವಸತಿ ಶಾಲೆಗಳಿಗೆ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಸಮಸ್ಯೆಯಾಗುತ್ತಿದೆ ಎಂದು ವಸಂತ ಕುಮಾರ್ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗಣೇಶ ಸೇವಾ ಟ್ರಸ್ಟ್‌ ನ ಅಧ್ಯಕ್ಷ ಮಹಾಬಲ ಮಾರ್ಲ, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ವೇಣು ಉಪಸ್ಥಿತರಿದ್ದರು.