ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ತಾಂತ್ರಿಕ ಹಬ್ಬವಾದ ಸಿನರ್ಜಿಯ 2026ರ ಉದ್ಘಾಟನೆಯು ನವೆಂಬರ್ 12 ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯೂ ಏಜ್ ಟೆಕ್ನಾಲಜೀಸ್, ಎನ್ವಿಡಿಯಾ ಇದರ ಉಪಾಧ್ಯಕ್ಷರಾದ ಡಾ.ಸಂಪತ್ ಕುಮಾರ್ ಇವರು ಇಂದಿನ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿದ್ಯಾರ್ಥಿಗಳ ಚಿಂತನೆಯನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳ ಅನಿವಾರ್ಯತೆಯನ್ನು ತಿಳಿಸಿದರು.
ವಿದ್ಯಾರ್ಥಿಗಳು ಪ್ರಕೃತಿಯಲ್ಲಿ ಹಾಸುಹೊಕ್ಕಾಗಿರುವ ವಿಜ್ಞಾನದ ಪರಿಕಲ್ಪನೆಯನ್ನು ಗುರುತಿಸಬೇಕಾದರೆ ಕೂತುಹಲದಾಯಕ ವೀಕ್ಷಣೆ ಮತ್ತು ಪ್ರಶ್ನಿಸುವ ಧೈರ್ಯ ತಂದುಕೊಳ್ಳಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಈಜಿ ಇಂಡಿಯಾದ ಮುಖ್ಯ ಡೇಟಾ ವಿಜ್ಞಾನಿ ಡಾ. ಪ್ರಖ್ಯಾತ ರೈ ಇವರು, ಇಂದು ಉದ್ಯಮ ಮಾರುಕಟ್ಟೆಯಲ್ಲಿ ಇರುವ ಸ್ಪರ್ಧಾತ್ಮಕ ವಾತಾವರಣದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕೌಶಲ್ಯಭರಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವಿದ್ದು, ಸಿನರ್ಜಿಯ ದಂತಹ ರಾಷ್ಟ್ರೀಯ ಸ್ಪರ್ಧೆಗಳು ತಮ್ಮ ಕೌಶಲ್ಯವನ್ನು ಹೆಚ್ಚಿಸುವ ವೇದಿಕೆಯಾಗಬೇಕೆಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ನೈನ್ಟ್ರಾನ್ ಟೆಕ್ ನ ಸಂಸ್ಥಾಪಕ ಶ್ರೀ. ಅಬ್ದುಲ್ ಶಮೀರ್ ಮಾತನಾಡಿ, ವಿದ್ಯಾರ್ಥಿಗಳು ಸಿನರ್ಜಿಯ ದಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಂಡು, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ತಯಾರಿ ನಡೆಸಬೇಕೆಂದು ತಿಳಿಸಿದರು.
ಸಹ್ಯಾದ್ರಿಯ ಆಡಳಿತಾಧಿಕಾರಿ ಶ್ರೀ. ಕೃಷ್ಣ ಹೆಗ್ಡೆ ಇವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಸ್.ಎಸ್. ಇಂಜಗನೇರಿ ಇವರು ಸಿನರ್ಜಿಯ ನಾಲ್ಕನೇ ಆವೃತ್ತಿಯನ್ನು ಆಚರಿಸುತ್ತಿದ್ದು ಕಳೆದ ಮೂರು ಆವೃತ್ತಿಗಳು ವಿದ್ಯಾರ್ಥಿಗಳ ವೈಜ್ಞಾನಿಕ ಚಿಂತನೆಗೆ ಮತ್ತು ನಾವಿನ್ಯತೆಗೆ ವೇದಿಕೆಯನ್ನು ಒದಗಿಸಿ ಕೊಟ್ಟಿದೆ. ಈ ಆವೃತ್ತಿ ಕೂಡ ಸುಮಾರು 5000 ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಕ್ಷೇಮ ಪಾಲಕ ಡೀನ್ ಡಾ. ಪ್ರಶಾಂತ್ ರಾವ್ ಇವರು ಕಾರ್ಯಕ್ರಮದ ವಿವರಗಳನ್ನು ನೀಡಿದರು. ಶೈಕ್ಷಣಿಕ ಡೀನ್ ಡಾ. ಶಮಂತ್ ರೈ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕಿ ಕುಶಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿ ಅದಿತಿ ಕಾರ್ಯಕ್ರಮವನ್ನು ನಿರ್ವಹಿಸಿದರು.

