ಬೆಂಗಳೂರು: ಪ್ರೌಢಶಾಲಾ ಶಿಕ್ಷಕರು ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಬಡ್ತಿ ಪಡೆಯಲು ಅರ್ಹತಾ ಅಂಕಗಳನ್ನು ಇಳಿಕೆ ಮಾಡಲಾಗಿದೆ.

ಶೇ.55 ರಿಂದ 50ಕ್ಕೆ ಇಳಿಸಲು, ʼಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ʼಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ‌ಸಂಬಂಧಿಸಿದಂತೆ ನಿಯಮಗಳನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಉಪನ್ಯಾಸಕರಾಗಲು ಇಚ್ಛಿಸುವ ಶಿಕ್ಷಕರು ಅರ್ಹತಾ ಪರೀಕ್ಷೆ ಬರೆಯಬೇಕಿದ್ದು, ಇನ್ನು ಮುಂದೆ ಶೇ.50 ಅಂಕ ಪಡೆದರೆ ಪಿಯು ಕಾಲೇಜು ಉಪನ್ಯಾಸಕರಾಗಲು ಅರ್ಹರಾಗುತ್ತಾರೆ.

ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿ ವೇಳೆ ಶೇ.75 ನೇರ ನೇಮಕಾತಿ ಹಾಗೂ ಶೇ.25 ಹುದ್ದೆಗಳಿಗೆ ಪ್ರೌಢಶಾಲೆ ಶಿಕ್ಷಕರಿಗೆ ಬಡ್ತಿ ನೀಡಿ ಭರ್ತಿ ಮಾಡಲಾಗುತ್ತಿದೆ.

ಪ್ರೌಢಶಾಲಾ ಶಿಕ್ಷಕರು ಪಿಯು ಉಪನ್ಯಾಸಕರಾಗಲು ಅರ್ಹತಾ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ.55 ಅಂಕ, ಪರಿಶಿಷ್ಟ ಜಾತಿ, ಪಂಗಡದವರು ಶೇ.50 ಅಂಕ ಪಡೆಯಬೇಕಿದೆ. ಇದೀಗ ಅರ್ಹತಾ ಅಂಕಗಳನ್ನು ಶೇ.55 ನಿಂದ 50ಕ್ಕೆ ಇಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.