ಪುತ್ತೂರು : ಮರ್ಯಾದಾ ಪುರುಷೋತ್ತಮ ಶ್ರೀರಾಮನು ನಮಗೆ ಆದರ್ಶ ವ್ಯಕ್ತಿ. ರಾಮನಂತೆ ನಡೆಯಲು ಅವನ ಗುಣಗಳನ್ನು ಅಳವಡಿಸಿಕೊಳ್ಳಬೇಕು. ನಿರಹಂಕಾರ, ಸಮಾಧಾನ ಹಾಗೂ ಕರ್ತವ್ಯನಿಷ್ಠೆ ರಾಮನ ಮುಖ್ಯ ಗುಣಗಳು. ಯಾವ ಕೆಲಸವನ್ನಾದರೂ ಅಡೆತಡೆಗಳ ನಡುವೆಯೂ ಪೂರ್ಣಗೊಳಿಸುವ ಸಂಕಲ್ಪವನ್ನು ಶ್ರೀರಾಮನ ಹಾಗೆ ನಾವು ಬೆಳೆಸಿಕೊಳ್ಳಬೇಕು ಎಂದು ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಡಾ. ಶಿಕಾರಿಪುರ ಕೃಷ್ಣಮೂರ್ತಿ ಹೇಳಿದರು.

ಅವರು ಗುರುವಾರ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯ ಹಾಗೂ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮೌಲಿಕ, ನೈತಿಕ, ಬೌದ್ಧಿಕ ಬಲದೊಂದಿಗೆ ಜೀವನ ಮುನ್ನಡೆಸಲು ನಿಶ್ಚಯಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ರಾಮಾಯಣ ದಾರಿದೀಪದಂತೆ. ಸಣ್ಣಪುಟ್ಟ ಸವಾಲುಗಳಿಗೂ ಬೆದರಿ ಕುಗ್ಗುವ ಮಾನಸಿಕತೆಯನ್ನು ತ್ಯಜಿಸಿ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮಬಲದಿಂದ ಎದುರಿಸಲು ರಾಮಹನುಮರ ಬದುಕು ಪ್ರೇರಣೆ ಎಂದು ನುಡಿದರು.
ಶ್ರೀರಾಮನ ನಡೆ ಜಗತ್ತಿಗೆಲ್ಲ ಮಾದರಿಯಾಗಿದ್ದು ವಿಶ್ವದ ಅನೇಕ ದೇಶಗಳಲ್ಲಿ ರಾಮಾಯಣದ ಕುರುಹುಗಳಿವೆ. ರಾಮಾಯಣ ಕೇವಲ ಕಾವ್ಯವಾಗಿರದೆ ಅದು ಜೀವನದ ಅವಿಭಾಜ್ಯ ಅಂಗವಾದಾಗ ವ್ಯಕ್ತಿ ಶಕ್ತಿಯಾಗಿ ಹೊರಹೊಮ್ಮುತ್ತಾನೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಶ್ರೀರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಯಾವಾಗ ರಾಮಜನ್ಮ ಭೂಮಿಯ ವಿನಾಶವಾಯಿತೋ ಆಗಿನಿಂದಲೇ ಭಾರತೀಯರ ಅಧಃಪತ ಪ್ರಾರಂಭವಾಯಿತು ಇದೀಗ ರಾಮಮಂದಿರದ ನಿರ್ಮಾಣವಾದಂದಿನಿಂದ ಸ್ವರ್ಣಯುಗವು ಪ್ರಾರಂಭವಾದಂತಾಗಿದೆ ಎಂದರು.
ಅAಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಉಪಪ್ರಾಚಾರ್ಯ ಪ್ರದೀಪ್ ಕೆ. ವೈ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಉಪಸ್ಥಿತರಿದ್ದರು. 9 ನೇ ತರಗತಿಯ ಅನುಶ್ರೀ ಎಮ್ ಪ್ರಾರ್ಥಿಸಿ, 10 ನೇ ತರಗತಿಯ ಅನರ್ಘ್ಯಶ್ರೀ ಸ್ವಾಗತಿಸಿದರು. 10ನೇ ತರಗತಿಯ ದೈವಿಕ್ ಶೆಟ್ಟಿ ವಂದಿಸಿ, 10ನೇ ತರಗತಿಯ ಅದಿತಿ ಎನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಭೌತಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ ಸ್ವಾಗತಿಸಿ ಸಹಕರಿಸಿದರು.

