ಬೆಂಗಳೂರು: ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ 2026ರ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಶನಿವಾರ ಪ್ರಕಟವಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಜಾಲತಾಣದಲ್ಲಿ www.kseab.karnataka.gov.in ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 2026ರ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿಗಳಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಸೆ. 20 ರಿಂದ 09.10.2025ರವರೆಗೆ ಕಾಲಾವಕಾಶ ನೀಡಲಾಗಿರುತ್ತದೆ.

ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಆಕ್ಷೇಪಣೆಗಳನ್ನು ಮಂಡಲಿಯ ಇ-ಮೇಲ್ ವಿಳಾಸ: [email protected] ಗೆ ಹಾಗೂ ಹಾರ್ಡ್ ಪ್ರತಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿಗೆ ನಿಗದಿತ ಸಮಯದೊಳಗೆ ಕಳುಹಿಸಬೇಕು.

2026ರ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ

ದ್ವಿತೀಯ ಪಿಯುಸಿ ಪರೀಕ್ಷೆ – 1 ರ ತಾತ್ಕಾಲಿಕ ವೇಳಾಪಟ್ಟಿಯಂತೆ ಮೊದಲ ಪರೀಕ್ಷೆ 2026ರ ಫೆಬ್ರವರಿ 28 ರಂದು ನಡೆಯಲಿದೆ. ಮಾರ್ಚ್ 17 ರಂದು ಕೊನೆಯ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ – 2 ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, 2026ರ ಏಪ್ರಿಲ್ 25 ರಂದು ಪರೀಕ್ಷೆ ಶುರುವಾಗಿ, ಮೇ 9 ರಂದು ಕೊನೆಗೊಳ್ಳಲಿದೆ.

2026ರ ಎಸ್​ಎಸ್​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ

ಎಸ್​ಎಸ್​ಎಲ್​ಸಿ ಪರೀಕ್ಷೆ – 1 ರ ತಾತ್ಕಾಲಿಕ ವೇಳಾಪಟ್ಟಿಯಂತೆ ಪರೀಕ್ಷೆ 2026ರ ಮಾರ್ಚ್ 18 ರಂದು ಆರಂಭವಾಗಿ ಏಪ್ರಿಲ್ 1 ರಂದು ಕೊನೆಗೊಳ್ಳಲಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ – 2 ರ ತಾತ್ಕಾಲಿಕ ವೇಳಾಪಟ್ಟಿಯಂತೆ ಮೇ 18ರಂದು ಪರೀಕ್ಷೆ ಆರಂಭವಾಗಿ ಮೇ 25 ರಂದು ಕೊನೆಗೊಳ್ಳಲಿದೆ.