ಬಂಟ್ವಾಳ: “ವಸಾಹತು ಮನೋಭಾವದಿಂದ ಭಾರತೀಯತೆಯೆಡೆಗೆ ಒಂದು ಚಿಂತನೆ”ಎಂಬ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವು ಮಾ.20 ರಂದು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಜಾದ್ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ತಿಳಿಸಿದ್ದಾರೆ.
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಹಿರಿಯ ಪತ್ರಕರ್ತ ರಂಗನಾಥ್ ಭಾರದ್ವಾಜ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಬಳಿಕ ನಡೆಯುವ ಮೊದಲ ಗೋಷ್ಠಿಯಲ್ಲಿ ಭಾಷೆ,ಧರ್ಮ,ಸಂಸ್ಕೃತಿ ಮತ್ತು ಆಚರಣೆಗಳ ಮೇಲೊಂದು ಇಣುಕುನೋಟ ಎಂಬ ವಿಷಯದ ಬಗ್ಗೆ ಪ್ರಾಧ್ಯಾಪಕಿ ಡಾ.ಆರತಿ ವಿ.ಬಿ,ಎರಡನೇ ಗೋಷ್ಠಿಯಲ್ಲಿ ಆಡಳಿತ ಮತ್ತು ನ್ಯಾಯಾಂಗದ ವ್ಯವಸ್ಥೆ ವಸಾಹತುಭಾವದಿಂದ ಮುಕ್ತವಾಗುವತ್ತ” ಎಂಬ ವಿಷಯದ ಬಗ್ಗೆ ಮಾಜಿ ಶಾಸಕ ರಾಜೀವ ಕುಡಚಿ,ಮೂರನೇ ಗೋಷ್ಠಿಯಲ್ಲಿ “ಶಿಕ್ಷಣ,ಇತಿಹಾಸದ ಮೇಲೊಂದು ಚರ್ಚೆ ” ಎಂಬ ವಿಷಯದ ಬಗ್ಗೆ ಚಿಂತಕ ರೋಹಿತ್ ಚಕ್ರತೀರ್ಥ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ ಹಾಗೂ 4 ನೇಗೋಷ್ಠಿಯಲ್ಲಿ ಮುಕ್ತಚಿಂತನೆ ಮತ್ತು ಸಮಾರೋಪದಲ್ಲಿಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ್ ಅವರು ಮಾತನಾಡಲಿದ್ದಾರೆ ಎಂದರು.
ಕಳೆದ 12 ವರ್ಷಗಳಿಂದ ರಾಷ್ಟ್ರೀಯ ವಿಚಾರಗಳನ್ನು ಮುಂದಿಟ್ಟುಕೊಂಡು ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಚಿಂತನ ಮಂಥನ ನಡೆಸಲಾಗಿದೆ ಎಂದು ಡಾ.ಪ್ರಭಾಕರ ಭಟ್ ತಿಳಿಸಿದರು.
ವಸಾಹತುಶಾಹಿ ಮನೋಭಾವದಿಂದ ಹೊರಬಂದು ಸ್ವದೇಶಿ ಚಿಂತನೆ,ಸಂಸ್ಕೃತಿ ಮತ್ತು ಆತ್ಮಸಮ್ಮಾನ ಬೆಳೆಸುವ ಮೂಲಕ ಭಾರತೀಯತೆಯತ್ತ ಮರಳುವುದು ಅಗತ್ಯವಾಗಿದ್ದು,ಈ ಕುರಿತಾಗಿ ಚಿಂತನೆ ನಡೆಸುವ ನಿಟ್ಟಿನಲ್ಲಿ “ವಸಾಹತು ಮನೋಭಾವದಿಂದ ಭಾರತೀಯತೆಯೆಡೆಗೆ ಒಂದು ಚಿಂತನೆ”ಎಂಬ ವಿಷಯ ಮುಂದಿಟ್ಟು ವಿಚಾರ ಸಂಕಿರಣ ನಡೆಸಲಾಗುತ್ತಿದೆ ಎಂದರು.
ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಶುಮಂದಿರದಿಂದ ಪದವಿ ಕಾಲೇಜಿನ ವರೆಗೆ ಸಂಸ್ಕಾರಯುತ ಶಿಕ್ಷಣದೊಂದಿಗೆ ಇತರ ಗುಣಗಳನ್ನು ಬೆಳೆಸಲು ಬೇಕಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಳ್ಳುತ್ತಾ ಬಂದಿದೆ. ಯುವಪೀಳಿಗೆಯಲ್ಲಿ ಸಮಾಜಪ್ರಜ್ಞೆಯನ್ನು ಬಿತ್ತಿ ಬೆಳೆಸುವ ಮಹತ್ತರವಾದ ಯೋಜನೆಯನ್ವಯ ಪ್ರತಿ ತಿಂಗಳು ಚಿಂತನ ಕೂಟ, ವರ್ಷಕ್ಕೊಮ್ಮೆ ವಿಚಾರಸಂಕಿರಣ ಬಹಳ ಮಹತ್ವದ್ದಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಸಂಸ್ಥೆಯ ಸಂಚಾಲಕಿ ಲಕ್ಷ್ಮೀ ರಘುರಾಜ್ ಮೊದಲಾದವರಿದ್ದರು.

