ಮಂಗಳೂರು: ಪ್ರತಿಷ್ಠಿತ ಬೆಸೆಂಟ್ ಸಮೂಹ ಸಂಸ್ಥೆಗೆ ಸೇರಿದ ನಗರದ ಬೊಂದೆಲ್ ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಮ್) ನ ವಿದ್ಯಾರ್ಥಿನಿ ಎಂ. ಅನುಷಾ ಪ್ರಭು 2023-2024ರ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.

ಅವರು ನಗರದ ಶ್ರೀ ಎಂ. ರಘುವೀರ ಪ್ರಭು ಮತ್ತು ಶ್ರೀಮತಿ ವಿಜಯಾ ಪ್ರಭು ಅವರ ಪುತ್ರಿ. ಅನುಷಾ ಅವರು ಶೈಕ್ಷಣಿಕ ಶ್ರೇಷ್ಠತೆಗಾಗಿ ವೈಶ್ಯ ಬ್ಯಾಂಕ್ ನಗದು ಬಹುಮಾನದ ಜೊತೆಗೆ 8.2 ರ ಅತ್ಯಧಿಕ ಸಿಜಿಪಿಎ ಸ್ಕೋರ್ ಪಡೆದಿದ್ದಕ್ಕಾಗಿ ವಿಶ್ವವಿದ್ಯಾಲಯದಿಂದ ಎರಡು ಚಿನ್ನದ ಪದಕಗಳನ್ನು (ರಾಮಕೃಷ್ಣ ಮಲ್ಯ ಚಿನ್ನದ ಪದಕ ಮತ್ತು ಡಾ. ಹೆಚ್. ವಿ. ಶಂಕರನಾರಾಯಣ ಚಿನ್ನದ ಪದಕ) ಸಹ ಪಡೆದಿದ್ದಾರೆ.

ಮಹಿಳಾ ರಾಷ್ಟ್ರೀಯ ಶಿಕ್ಷಣ ಸೊಸೈಟಿ (ಡಬ್ಲ್ಯೂಎನ್‌ಇಎಸ್) ಅಧ್ಯಕ್ಷ ಮಣೆಲ್ ಅಣ್ಣಪ್ಪ ನಾಯಕ್ ಮತ್ತು ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅನುಷಾ ಅವರ ಸಾಧನೆಯನ್ನು ಅಭಿನಂದಿಸಿದರು.

ಈ ವರ್ಷ ತನ್ನ ರಜತ ಮಹೋತ್ಸವವನ್ನು ಆಚರಿಸುತ್ತಿರುವ ಸಂಸ್ಥೆಯು ಗುಣಮಟ್ಟದ ಮ್ಯಾನೇಜ್‌ಮೆಂಟ್ ಶಿಕ್ಷಣವನ್ನು ನೀಡುವುದರ ಜೊತೆಗೆ ಕಳೆದ ಹಲವಾರು ವರ್ಷಗಳಿಂದ ಸತತವಾಗಿ ರ‍್ಯಾಂಕ್‌ ಗಳನ್ನು ಗಳಿಸುತ್ತಿದೆ.