ಮಂಗಳೂರು: ಇತ್ತೀಚೆಗೆ ಕೆನರಾ ಕಾಲೇಜಿನ (ಸ್ವಾಯತ್ತ), ಸೆಮಿನಾರ್ ಹಾಲ್‌ನಲ್ಲಿ ಎಂ.ಕಾಂ. ವಿಭಾಗದ ಓರಿಯೆಂಟೇಶನ್ ಕಾರ್ಯಕ್ರಮವನ್ನು ನೂತನ ಎಂ.ಕಾಂ. ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಹಾಗೂ ಅವರ ಶೈಕ್ಷಣಿಕ ಪಯಣಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮವು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಶುಭಾರಂಭಗೊಂಡಿತು. ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಂಯೋಜಕಿಯಾದ ಶ್ರೀಮತಿ ಸ್ವಾತಿ ನಾಯಕ್ ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ, ಕಾಲೇಜಿನಲ್ಲಿ ದೊರೆಯುವ ವಿವಿಧ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕಲಿಕೆಯತ್ತ ಆಸಕ್ತಿ ಮತ್ತು ಉತ್ಸಾಹದಿಂದ ಮುನ್ನಡೆಯುವಂತೆ ಪ್ರೇರೇಪಿಸಿದರು.

ಎರಡು ವರ್ಷಗಳ ಎಂ.ಕಾಂ. ಕಲಿಕೆಯ ಅವಧಿಯನ್ನು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತಗೊಳಿಸದೆ, ಹೊಸ ವಿಷಯಗಳನ್ನು ಕಲಿತು, ಕೌಶಲ್ಯಗಳನ್ನು ಬೆಳೆಸಿಕೊಂಡು ಸಂತೋಷದಿಂದ ಅನುಭವಿಸುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ತಮ್ಮ ಗುರಿಯತ್ತ ಗಮನಹರಿಸಿ ಉತ್ತಮ ಸಾಧನೆ ಮಾಡುವಂತೆ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳಲ್ಲಿ ಕಾಲೇಜಿನ ಸಂಚಾಲಕರಾದ ಸಿಎ. ಜಗನ್ನಾಥ್ ಕಾಮತ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಎರಡು ವರ್ಷಗಳ ಅಧ್ಯಯನದ ಅವಧಿಯಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನೂ ಸಮಯೋಚಿತವಾಗಿ ಬಳಸಿಕೊಂಡು, ಎಂ.ಕಾಂ. ಪದವಿ ಪೂರ್ಣಗೊಳಿಸಿದ ನಂತರ ಸಂಸ್ಥೆ ಹಾಗೂ ಸಮಾಜಕ್ಕೆ ಅಮೂಲ್ಯ ಆಸ್ತಿಯಾಗುವಂತೆ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಶ್ರೀಮತಿ ಶ್ವೇತಾ ಪೈ ಹಾಗೂ ಇತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಸ್ನೇಹಾ ಪೈ ಅವರು ಕಾರ್ಯಕ್ರಮ ನಿರೂಪಿಸಿದರು.