ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಹಲವು ದಶಕಗಳಿಂದ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದೆ. ಕಳೆದ 15 ವರ್ಷಗಳಿಂದ ಈ ಕಾಲೇಜಿನ ಎಂ.ಕಾಂ ವಿಭಾಗವು ಉತ್ತಮ ಫಲಿತಾಂಶಗಳು ಹಾಗೂ ವಿಶ್ವವಿದ್ಯಾಲಯದ ರಾಂಕ್ ಗಳನ್ನು ನಿರಂತರವಾಗಿ ಪಡೆದು, ವಿದ್ಯಾರ್ಥಿಗಳ ಸಾಧನೆಗೆ ದಾರಿದೀಪವಾಗಿ, ಕಾಲೇಜು ಹಾಗೂ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದು ಕೊಟ್ಟಿದೆ.

ಈ ವಿಭಾಗವು ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯಲು ಉತ್ತಮ ಅವಕಾಶವನ್ನು ಒದಗಿಸುತ್ತಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುವ ಪ್ರಮುಖ ವೇದಿಕೆಯಾಗಿದೆ.

ಅಲ್ಲದೆ, ಮಂಗಳೂರು ನಗರವು ಉತ್ತಮ ಬಸ್ ಹಾಗೂ ರೈಲು ಸಂಪರ್ಕ ವ್ಯವಸ್ಥೆಯನ್ನು ಹೊಂದಿರುವುದರಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ಕಾಲೇಜನ್ನು ಸುಲಭವಾಗಿ, ಸುರಕ್ಷಿತವಾಗಿ ಹಾಗೂ ಅನುಕೂಲಕರವಾಗಿ ತಲುಪಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಹೆಚ್ಚುವರಿ ವಸತಿ ಅಥವಾ ಸಾರಿಗೆ ವೆಚ್ಚವನ್ನು ಭರಿಸುವ ಅಗತ್ಯವಿಲ್ಲದೆ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅನುಕೂಲವಾಗುತ್ತದೆ.

ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷದ ವಿಶ್ವವಿದ್ಯಾಲಯದ ಅಧಿಕೃತ ಪ್ರವೇಶ ಅಧಿಸೂಚನೆಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರಿನ ಎಂ.ಕಾಂ. ಕೋರ್ಸ್‌ಗೆ ಪ್ರವೇಶ ಪ್ರಕಟವಾಗದಿರುವುದು ವಿದ್ಯಾರ್ಥಿಗಳು, ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮತ್ತು ನಿರಾಶೆಯನ್ನು ಉಂಟುಮಾಡಿದೆ.

ಆದ್ದರಿಂದ, ಕಾಲೇಜಿನ ಶೈಕ್ಷಣಿಕ ಪರಂಪರೆ, ವಿಭಾಗದ ಅತ್ಯುತ್ತಮ ಸಾಧನೆ, ವಿದ್ಯಾರ್ಥಿಗಳ ಹಿತಾಸಕ್ತಿ, ನಗರದ ಸುಲಭ ಸಂಪರ್ಕ ವ್ಯವಸ್ಥೆ ಹಾಗೂ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸುತ್ತಿರುವ ಮಹತ್ವವನ್ನು ಪರಿಗಣಿಸಿ, ವಿಶ್ವವಿದ್ಯಾನಿಲಯ ಕಾಲೇಜಿನ ಎಂ.ಕಾಂ. ಕೋರ್ಸ್‌ನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೂ ಪ್ರವೇಶಕ್ಕೆ ಅನುಮತಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ವಿನಮ್ರವಾಗಿ ಕೋರುತ್ತೇವೆ.

ತಮ್ಮ ಸಕಾರಾತ್ಮಕ ನಿರ್ಧಾರವು ನೂರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುವುದರ ಜೊತೆಗೆ, ಸಮಾಜಕ್ಕೆ ಗುಣಮಟ್ಟದ ವಾಣಿಜ್ಯ ತಜ್ಞರನ್ನು ರೂಪಿಸುವ ವಿಶ್ವವಿದ್ಯಾಲಯದ ಧ್ಯೇಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ದೃಢ ವಿಶ್ವಾಸ ನಮ್ಮದು.