ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024 ಮುಂದಿನ ನವೆಂಬರ್ 24ರಂದು ಪರೀಕ್ಷೆ ನಡೆಸಲು ಯೋಜಿಸಿದೆ.
ಕಳೆದ ಜುಲೈ 22ರಿಂದಲ್ಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಆಗಸ್ಟ್ 22ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಆಗಸ್ಟ್ 26ರಂದು ಕಡೆ ದಿನವಾಗಿದೆ.
ಅಭ್ಯರ್ಥಿಗಳು ಕೆಸೆಟ್-2024ಕ್ಕೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಯಾವುದೇ ಇತರ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಕೆಇಎ ವೆಬ್ ಸೈಟ್ http://kea.kar.nic.in ಅನ್ನು ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಆಯಾ ಸಂಸ್ಥೆಗಳ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ.
ವಿಕಲಚೇತನ, ತೃತೀಯ ಲಿಂಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದವರ ಪಟ್ಟಿಯಲ್ಲಿರುವಂತಿರಬೇಕು.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇಲ್ಲ. ಕೆಸೆಟ್ ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆ ಇರಲಿದ್ದು, ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯನ್ನು ನವೆಂಬರ್ 24ರಂದು ನಡೆಸಲಾಗುತ್ತದೆ.
ನವೆಂಬರ್ 24ರ ಬೆಳಗ್ಗೆ 10ರಿಂದ 1 ರವರೆಗೆ ಪರೀಕ್ಷೆ ನಡೆಯಲಿದೆ. ಮೊದಲ ಪತ್ರಿಕೆ 100 ಅಂಕಗಳಿಗೆ (50 ಪ್ರಶ್ನೆಗಳು ಕಡ್ಡಾಯವಾಗಿರುತ್ತದೆ), ಎರಡನೇ ಪತ್ರಿಕೆ 200 ಅಂಕ (100 ಪ್ರಶ್ನೆಗಳು ಕಡ್ಡಾಯವಾಗಿರುತ್ತದೆ). ಅಭ್ಯರ್ಥಿಗಳು ಮಧ್ಯಾಹ್ನ 1 ಗಂಟೆಯ ಮೊದಲು ಪರೀಕ್ಷಾ ಕೇಂದ್ರದಿಂದ ಹೊರಬರಲು ಅನುಮತಿಸಲಾಗುವುದಿಲ್ಲ.
ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬೀದರ್, ದಾವಣಗೆರೆ, ಧಾರವಾಡ ಹಾಗೂ ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ವಿಜಯಪುರದಲ್ಲಿ ಪರೀಕ್ಷೆ ನಡೆಯಲಿದೆ.

