ಮಂಗಳೂರು: ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಎಸ್.ಜೆ.ಇ.ಸಿ) ಹಳೆ ವಿದ್ಯಾರ್ಥಿಗಳ ಸಂಘವು, ಎಸ್.ಜೆ.ಇ.ಸಿ ಫೌಂಡೇಶನ್ ಸಹಯೋಗದೊಂದಿಗೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ “ಶಾಂತಿಗಾಗಿ ವಿಜ್ಞಾನ” ಎಂಬ ಆಶಯದೊಂದಿಗೆ ಒಂದು ದಿನದ ವಿಜ್ಞಾನ ಹಬ್ಬವಾದ ಜ್ಞಾನಸೇತು 2026 ಅನ್ನು ಆಯೋಜಿಸಿತು.

ವಿಜ್ಞಾನವು ಜ್ಞಾನವನ್ನು ಸಮಾಜದ ಅಗತ್ಯಗಳೊಂದಿಗೆ ಬೆಸೆಯುವ ಸೇತುವೆಯಾಗಿದೆ ಎಂಬುದನ್ನು ಯುವ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 2026ರ ಅಕ್ಟೋಬರ್ 30ರ ಶುಕ್ರವಾರದಂದು ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಎಸ್.ಜೆ.ಇ.ಸಿ) ಕಲಾಂ ಸಭಾಂಗಣದಲ್ಲಿ ನಡೆಯಿತು. ಇಸ್ರೋದ ನಿವೃತ್ತ ಹಿರಿಯ ವಿಜ್ಞಾನಿ ಡಾ. ಟಿ. ಎನ್. ಸುರೇಶ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಲೀಝಾ ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜಾ ಅವರು ಪುಷ್ಪಗುಚ್ಛ ನೀಡಿ ಅವರನ್ನು ಸ್ವಾಗತಿಸಿದರು. ಬಳಿಕ ಡಾ. ಸುರೇಶ್ ಕುಮಾರ್ ಹಾಗೂ ಇತರ ಗಣ್ಯರು ದೀಪ ಬೆಳಗಿಸುವ ಮೂಲಕ ವಿಜ್ಞಾನ ಹಬ್ಬವನ್ನು ಉದ್ಘಾಟಿಸಿದರು.

ಗೌರವಾನ್ವಿತ ಅತಿಥಿಗಳು ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಸಾಹಸಿ ಅನ್ವೇಷಕ ಹಾಗೂ ಶಿಕ್ಷಣ ತಜ್ಞರಾಗಿದ್ದು, 30ಕ್ಕೂ ಹೆಚ್ಚು ಉಪಗ್ರಹ ಉಡಾವಣಾ ಕಾರ್ಯಾಚರಣೆಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ರಷ್ಯಾದ ಯೂರಿ ಗಗಾರಿನ್ ಕಾಸ್ಮೋನಾಟ್ ತರಬೇತಿ ಕೇಂದ್ರದಿಂದ ಶೂನ್ಯ ಗುರುತ್ವಾಕರ್ಷಣೆಯ ವಿಮಾನಯಾನ, ಬಾಹ್ಯಾಕಾಶದ ಅಂಚಿನವರೆಗಿನ ಪಯಣ, ಸಹಾರಾ ಮರುಭೂಮಿಯ ಅನ್ವೇಷಣೆ ಹಾಗೂ ಕಾಂಗೋದಲ್ಲಿರುವ ಸಕ್ರಿಯ ನೈರಗೊಂಗೊ ಜ್ವಾಲಾಮುಖಿಯ ಶಿಖರಾರೋಹಣ ಸೇರಿದಂತೆ ಹಲವಾರು ಸಾಹಸಮಯ ಯಾತ್ರೆಗಳನ್ನು ಕೈಗೊಂಡಿದ್ದಾರೆ.

ವಿಶ್ವದ 187ಕ್ಕೂ ಹೆಚ್ಚು ದೇಶಗಳು ಹಾಗೂ 7 ಖಂಡಗಳಿಗೆ ಭೇಟಿ ನೀಡಿರುವ ಅವರು, ಈಸ್ಟರ್ ದ್ವೀಪ ಮತ್ತು ಚೆರ್ನೋಬಿಲ್ನಂತಹ ವಿಶಿಷ್ಟ ಸ್ಥಳಗಳನ್ನೂ ಅನ್ವೇಷಿಸಿದ್ದಾರೆ. ಶಿಕ್ಷಣ ತಜ್ಞ ಹಾಗೂ ವಿಜ್ಞಾನ ಸಂವಹನಕಾರರಾಗಿ, ಐಐಟಿ ಮತ್ತು ಎನ್ಐಟಿಗಳಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಮತ್ತು ಭೂ ವಿಜ್ಞಾನದ ಕುರಿತು ತಮ್ಮ ಅಪಾರ ಜ್ಞಾನ ಹಾಗೂ ಅನುಭವವನ್ನು ಹಂಚಿಕೊಂಡಿದ್ದಾರೆ.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಡಾ. ಸುರೇಶ್ ಕುಮಾರ್ ಅವರು, ವಿಜ್ಞಾನವು ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ಮೂಲಕ ಮಾನವ ಜೀವನವನ್ನು ಸುಖಮಯವಾಗಿಸುತ್ತದೆ ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ವಿಜ್ಞಾನವು ಜಗತ್ತಿಗೆ ಹೇಗೆ ನೆರವಾಯಿತು ಎಂಬುದನ್ನು ಅವರು ಸ್ಮರಿಸಿದರು. ವಿದ್ಯಾರ್ಥಿಗಳು ಕೈಗೊಳ್ಳುವ ಪ್ರತಿಯೊಂದು ಕಾರ್ಯವೂ ಸಮಾಜದ ಮತ್ತು ಮಾನವಕುಲದ ಹಿತಕ್ಕೆ ಪೂರಕವಾಗಿರಬೇಕು ಎಂದು ಪ್ರತಿಜ್ಞೆ ಬೋಧಿಸಿದರು.

ವಿದ್ಯಾರ್ಥಿಗಳು ತಮ್ಮ ಗುರಿಗಳತ್ತ ಗಮನ ಕೇಂದ್ರೀಕರಿಸಬೇಕು, ಸಂವಹನ ಕೌಶಲಗಳನ್ನು ಬೆಳೆಸಿಕೊಳ್ಳಬೇಕು, ವಿಮರ್ಶಾತ್ಮಕವಾಗಿ ಆಲೋಚಿಸಬೇಕು ಹಾಗೂ ಕೇವಲ ಅಂಕಗಳ ಹಿಂದೆ ಓಡುವ ಬದಲು ಪ್ರಾಯೋಗಿಕ ಮತ್ತು ನೈಜ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಂಪ್ಯೂಟರ್ಗಳ ಆಗಮನದಂತೆ ಕೃತಕ ಬುದ್ಧಿಮತ್ತೆ ಕೂಡ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ತಿಳಿಸಿದ ಅವರು, ಶಿಕ್ಷಕರನ್ನು ರಾಷ್ಟ್ರ ನಿರ್ಮಾತೃಗಳು ಎಂದು ಬಣ್ಣಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜಾ ಅವರು ಮಾತನಾಡಿ, ಹಳೆ ವಿದ್ಯಾರ್ಥಿಗಳ ಉಪಕ್ರಮವಾಗಿ ಆರಂಭಗೊಂಡ ಜ್ಞಾನಸೇತು ಇಂದು ಜ್ಞಾನದ ಸೇತುವೆಯಾಗಿ ಬೆಳೆದಿದೆ ಎಂದು ಹೇಳಿದರು. ದುರಾಸೆಯಿಂದ ಪ್ರೇರಿತವಾಗದ, ಸುಸ್ಥಿರ ತಂತ್ರಜ್ಞಾನವನ್ನು ರೂಪಿಸುವ ನಿಟ್ಟಿನಲ್ಲಿ ಯುವಜನರು ಸಮಾಜದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಪ್ರಭಾರ ನಿರ್ದೇಶಕರಾದ ವಂ. ಫಾ. ಕೆನ್ನೆತ್ ಆರ್. ಕ್ರಾಸ್ತಾ ಅವರು, ಪ್ರದರ್ಶನದಲ್ಲಿರುವ ಮಾದರಿಗಳು ಕೇವಲ ಸ್ಪರ್ಧೆಗಾಗಿ ಸಿದ್ಧಪಡಿಸಿದವುಗಳಲ್ಲ; ಅವು ಭವಿಷ್ಯದಲ್ಲಿ ನನಸಾಗಬಹುದಾದ ಕನಸುಗಳಾಗಿವೆ ಎಂದು ಹೇಳಿದರು. ವಿದ್ಯಾರ್ಥಿಗಳು ನೈಜ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯುವ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಪ್ರೇರೇಪಿಸಿದರು. ಕಾರ್ಯಕ್ರಮದ ಸಂಚಾಲಕರಾದ ಫ್ರಾಂಕೊ ಮೆನೆಜೆಸ್ಅವರು ವಂದನಾರ್ಪಣೆ ಸಲ್ಲಿಸುವುದರೊಂದಿಗೆ ಉದ್ಘಾಟನಾ ಸಮಾರಂಭ ಮುಕ್ತಾಯಗೊಂಡಿತು.

ಉದ್ಘಾಟನೆಯ ಬಳಿಕ ಕಾಲೇಜಿನ ಆವರಣದಲ್ಲಿ ಆರು ಸ್ಪರ್ಧಾತ್ಮಕ ಕಾರ್ಯಕ್ರಮಗಳು ನಡೆದವು. ಅವುಗಳೆಂದರೆ ಇನ್ನೋವೇಟ್ ಫಾರ್ ಪೀಸ್ (ಮಾದರಿ ಸ್ಪರ್ಧೆ), ಕ್ವಿಜ್_ವಿಜ್ 2026 (ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾತ್ರ), ಮಿಷನ್ ಅರ್ಥ್ (ಪರಿಸರ-ತಂತ್ರಜ್ಞಾನ ಪೋಸ್ಟರ್ ಸ್ಪರ್ಧೆ), ಇಗ್ನೈಟ್ ಅಂಡ್ ಇನ್ಸ್ಪೈರ್, ಹೈಡ್ರೋಕ್ಯಾನನ್ ಮತ್ತು ಲೋಡ್ ಅಪ್. ಈ ವಿಜ್ಞಾನ ಹಬ್ಬದಲ್ಲಿ 20 ಶಾಲೆಗಳು ಹಾಗೂ 6 ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.

ಕಾರ್ಯಕ್ರಮವನ್ನು ಫ್ರಾಂಕೊ ಮೆನೆಜೆಸ್ ಮತ್ತು ಒಲಿವಿಯಾ ಸಿಕ್ವೇರಾ ಅವರು, ಹಳೆ ವಿದ್ಯಾರ್ಥಿಗಳ ಸಂಬಂಧಗಳ ವಿಭಾಗದ ಅಧ್ಯಕ್ಷರಾದ ವಿನೂಥನ್ ಕಳಿವೀರ್ ಅವರ ಸಹಯೋಗದೊಂದಿಗೆ ಸಂಯೋಜಿಸಿದರು. ಜ್ಞಾನಸೇತು 2026 ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಸೃಜನಶೀಲತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಲ್ಲಿ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಬದ್ಧತೆಯನ್ನು ಪ್ರತಿಬಿಂಬಿಸಿತು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಶಾಂತಿ ಹಾಗೂ ಸಮಾಜದ ಸಮಗ್ರ ಹಿತಕ್ಕಾಗಿ ಬಳಸಿದಾಗ ಅವು ಮಾನವಕುಲಕ್ಕೆ ಅತ್ಯಂತ ಪ್ರಯೋಜನಕಾರಿಯಾಗುತ್ತವೆ ಎಂಬ ಮಹತ್ವದ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು.

ಕಾರ್ಯಕ್ರಮದ ಅಂತ್ಯದಲ್ಲಿ ಬಹುಮಾನ ವಿತರಣಾ ಸಮಾರಂಭ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಂದ ಜ್ಞಾನಸೇತು 2026ರ ಕುರಿತು ಅಭಿಪ್ರಾಯ ಸಂಗ್ರಹಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಬಾರಿಯ ಜ್ಞಾನಸೇತು 2026 ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಾಲಾ ವಿಭಾಗದಲ್ಲಿ: ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯು ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ಸಂತ ಆಗ್ನೆಸ್ ಶಾಲೆಯು ಅತ್ಯುತ್ತಮ ಪ್ರದರ್ಶನದೊಂದಿಗೆ ಒಟ್ಟಾರೆ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪದವಿಪೂರ್ವ ಕಾಲೇಜು ವಿಭಾಗದಲ್ಲಿ: ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯು ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ಮಂಗಳೂರಿನ ಬೊಂಡಂತಿಲದಲ್ಲಿರುವ ಪ್ರೆಸಿಡೆನ್ಸಿ ಶಾಲೆಯು ಅತ್ಯುತ್ತಮ ಪ್ರದರ್ಶನದೊಂದಿಗೆ ಒಟ್ಟಾರೆ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.