ಮಂಗಳೂರು: ಭಾರತೀಯ ಅಂಗಾಂಗ ದಾನ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ ಕಾರ್ಯಕ್ರಮ ಈ ಬಾರಿ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆ. 1ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್. ತಿಮ್ಮಯ್ಯ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ವಿಧಾನಸಭೆ ಸ್ಪೀಕರ್ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸೇರಿದಂತೆ ಇತರ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿ ಸಲಿದ್ದಾರೆ ಎಂದವರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದಡಿ ರಾಜ್ಯ ಅಂಗಾಂಗ ಮತ್ತು ಅಂಗಾಂಗ ಕಸಿ (ಎಸ್‌ಒಟಿಟಿಒ)-ಜೀವನ ಸಾಥಕತೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು ರಾಜ್ಯದಲ್ಲಿ ಜುಲೈ 30ರವರೆಗೆ 43,221 ಮಂದಿ ಸಾರ್ವಜನಿಕರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ರಾಜ್ಯದಲ್ಲಿ ಮಂಗಳೂರು ವಲಯ (ದ.ಕ, ಉಡುಪಿ, ಉ.ಕ., ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ) ನಾಲ್ಕನೆ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 2017ರಿಂದ 2025ರ ಜೂನ್ 30ರವರೆಗೆ 979 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ದಾನ ಮಾಡಲಾದ ಅಂಗಾಂಗಗಳಲ್ಲಿ ಮೂತ್ರಪಿಂಡಗಳ ಸಂಖ್ಯೆ 1481, ಯಕೃತ್ (ಲಿವರ್) 812, ಹೃದಯ 251, ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿ 25, ಸಣ್ಣ ಕರುಳು 11, ಶ್ವಾಸಕೋಶಗಳು 129, ಯಕೃತ್ ಮತ್ತು ಮೂತ್ರಪಿಂಡಗಳು 44, ಹೃದಯದ ಕವಾಟ 396, ಕಾರ್ನಿಯಾ 1494, ಚರ್ಮ 106 ಹಾಗೂ ಕೈ 2 ಸೇರಿವೆ. ಮಂಗಳೂರು ವಲಯದಲ್ಲಿ 2019ರಿಂದ ಈವರೆಗೆ 141 ಮಂದಿ ಅಂಗಾಂಗ ದಾನ ಮಾಡಿದ್ದಾರೆ ಎಂದು ಅವರು ವಿವರ ನೀಡಿದರು.
ಟ್ರಾಮಾ ಕೇರ್ ಮತ್ತು ಎಮರ್ಜೆನ್ಸಿ ಸೆಂಟರ್ ಸೇರಿದಂತೆ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳ ನಾನ್ ಟ್ರಾನ್ಸ್‌ಪ್ಲಾಂಟ್ ಆರ್ಗನ್ ರಿಟ್ರೇವಲ್ ಸೆಂಟರ್ (ಎನ್‌ಟಿಒಆರ್‌ಸಿ)ಗಳಲ್ಲಿ ಮೆದುಳು ನಿಷ್ಕ್ರಿಯ ಗೊಂಡ ವ್ಯಕ್ತಿಯ ಶರೀರದಿಂದ ಪಡೆದು ಕಸಿ ಕೇಂದ್ರಗಳಿಗೆ ಗ್ರೀನ್ ಕಾರಿಡಾರ್ ಮೂಲಕ ತಲುಪಿಸಲಾಗುತ್ತದೆ. ಪ್ರತಿ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲಂ ಕಾಲೇಜುಗಳಲ್ಲಿ ಎನ್‌ಟಿಒಆರ್‌ಸಿ ಸ್ಥಾಪಿಸಲಾಗುವುದು. ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಎನ್‌ಟಿಒಆರ್‌ಸಿ ಆಗಿ ನೋಂದಣಿ ಪಡೆದಿದ್ದು ಇಲ್ಲಿ ಅಂಗಾಂಗ ದಾನವೂ ನಡೆದಿದೆ ಎಂದು ಅವರು ಹೇಳಿದರು.

