ಮಂಗಳೂರು: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೀರಿನಿಂದ ಹೈಡ್ರೋಜನ್‌ ತಯಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಮುಖ್ಯ ಭೂಮಿಕೆಗೆ ಬರಲಿದೆ. ಕಾರ್ಖಾನೆಗಳಲ್ಲಿ ಆರಂಭಿಕ ಹಂತದಲ್ಲಿ ಹಸುರು ಹೈಡ್ರೋಜನ್‌ ಬಳಸಲು ಒತ್ತು ನೀಡಲಾಗುತ್ತಿದೆ ಎಂದು ಹೈಡ್ಜೆನ್‌ ಸಂಸ್ಥೆಯ ನಿರ್ದೇಶಕ ಡಾ| ಮಾಣಿಪ್ಪಾಡಿ ಕೃಷ್ಣ ಕುಮಾರ್‌ ಹೇಳಿದರು.

ಸಹ್ಯಾದ್ರಿ ಕಾಲೇಜಿನಲ್ಲಿರುವ ಹೈಡ್ರೋ ಜನ್‌ ಇನ್ನೋವೇಶನ್‌ ಪ್ರೈವೇಟ್‌ ಲಿ. ವತಿಯಿಂದ ಹೈಡ್ರೋಜನ್‌ ನಾವೀನ್ಯತೆ ದಿನಾಚರಣೆ ಹಿನ್ನೆಲೆ ಕಾಲೇಜಿನ ಆವರಣ ದಲ್ಲಿ ಆಯೋಜಿಸಲಾಗಿದ್ದ ಪ್ರಾತ್ಯಕ್ಷಿಕೆಯ ಕುರಿತು ಮಾಹಿತಿ ನೀಡಿದರು.

ಸೋಲಾರ್‌, ವಿಂಡ್‌, ಹೈಡ್ರೋ ಪವರ್‌ ದೇಶದಲ್ಲಿ ಲಭ್ಯವಿದೆ. ಆದರೆ,ಇವುಗಳನ್ನು ನೇರವಾಗಿ ಸಂಗ್ರಹಿಸಿಡುವ ವ್ಯವಸ್ಥೆ ಇಲ್ಲ. ಹೈಡ್ರೋಜನ್‌ ಸಂಗ್ರಹಿಸಿ ಡಲು ಸಾಧ್ಯವಿದೆ. ರಸಗೊಬ್ಬರ, ಉಕ್ಕು, ರಾಸಾಯನಿಕಗಳು ಹಾಗೂ ಸಂಸ್ಕರಣಾ ವಲಯಗಳಿಗೆ ಹೈಡ್ರೋಜನ್‌ ಭವಿಷ್ಯದ ಶಕ್ತಿ. ಹಸಿರು ಇಂಧನಕ್ಕೆ ಪೂರಕವಾಗಿ ಹೈಡ್ರೋಜನ್‌ ತಯಾರಿಸಲು ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದರು.

ಹೈಡೆjನ್‌ ನ ಘಟಕ ಕಾಲೇಜಿನ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ಹೈಡ್ರೋಜನ್‌ ಗ್ಯಾಸ್‌ ತಯಾರಿಸಲು ಬೇಕಾದ ಎಲೆಕ್ಟೊಲೈಸರ್‌ ಗಳನ್ನು ತಯಾರಿಸಿ ಪರೀಕ್ಷಿಸಲಾಗುತ್ತಿದೆ. ದೇಶದಲ್ಲಿ 25 ಕಿ.ವ್ಯಾ. ಘಟಕ ಅನ್ವೇಷಣೆ ಇದೇ ಮೊದಲ ಬಾರಿಗೆ ಮಾಡಲಾಗಿದೆ ಎಂದು ಹೇಳಿದರು.

ಸೀನಿಯರ್‌ ಸ್ಟಾಕ್‌ ಎಂಜಿನಿಯರ್‌ ಕಿರಣ್‌ ಕುಮಾರ್‌, ಈಗಿನ ವಿಧಾನದಲ್ಲಿ ಪ್ರತೀ ಕೆ.ಜಿ. ಹೈಡ್ರೋಜನ್‌ ತಯಾರಿಸು ವಾಗ 9 ಕೆ.ಜಿ. ಇಂಗಾಲ ಪರಿಸರಕ್ಕೆ ಸೇರುತ್ತಿದೆ. ಆದರೆ, ಹೊಸ ವಿಧಾನವು ಇಂಗಾಲ ಬಿಡುಗಡೆಗೊಳಿಸದೇ 9 ಲೀ. ನೀರಿನಿಂದ ಸುಮಾರು 50 ಯುನಿಟ್‌ ವಿದ್ಯುತ್‌ ಬಳಸಿ 1 ಕೆ.ಜಿ. ಹೈಡ್ರೋಜನ್‌ ತಯಾರಿಸುತ್ತದೆ. 25 ಕಿ.ವ್ಯಾ. ಉಪಕರಣದಿಂದ ದಿನಕ್ಕೆ 10.7 ಕೆ.ಜಿ. ಹೈಡ್ರೋಜನ್‌ ತಯಾರಿಸಲು ಸಾಧ್ಯ ಎಂದರು.

ಕೆಆರ್‌ಇಡಿಎಲ್‌ನ ಚೇರ್‌ವೆುನ್‌ ಹಾಗೂ ಶಾಸಕ ಟಿ.ಡಿ. ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಹೈಡ್ಜೆನ್‌ ಚೇರ್‌ವೆುನ್‌ ಡಾ| ಮೈಕಲ್‌ ಗ್ರೆಸೀಲ್ಸ್‌, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ| ಎಸ್‌.ಎಸ್‌. ಇಂಜಗನೇರಿ, ಹಿರಿಯ ವಿಜ್ಞಾನಿ, ಡಿಎಸ್‌ಟಿ ಸಂಸ್ಥೆಯ ನಿರ್ದೇಶಕ ಡಾ| ರಂಜಿತ್‌ ಕೃಷ್ಣ ಪೈ, ಹಿರಿಯ ಕಾರ್ಯಕ್ರಮ ಮುಖ್ಯಸ್ಥ ಡಾ| ದೀಪಕ್‌ ಯಾದವ್‌, ಮುಖ್ಯ ತಾಂತ್ರಿಕ ಅಧಿಕಾರಿ ಗೌತಮ್‌ ದಳಪತಿ, ಕಾಲೇಜಿನ ಸಂಶೋಧನಾ ವಿಭಾಗದ ನಿರ್ದೇಶಕ ಪ್ರೊ| ಮಂಜಪ್ಪ, ಹೈಡ್ಜೆನ್‌ ಕಂಪೆನಿಯ ನಿರ್ದೇಶಕಿ ರಮ್ಯಶ್ರೀ, ಪ್ರಮುಖರಾದ ಚಂದ್ರಶೇಖರ್‌ ಐತಾಳ್‌, ಅಜಿತ್‌, ಅಮರ್‌ ಪ್ರಸಾದ್‌ ಇದ್ದರು.