ಮಂಗಳೂರು: “ಇಂದಿನ ತಂತ್ರಜ್ಞಾನ ಯುಗದಲ್ಲಿ ಕೇವಲ ಬೌದ್ಧಿಕತೆ ಸಾಕಾಗುವುದಿಲ್ಲ. ವಿವೇಕಾನಂದರು ಹೇಳಿದಂತೆ ತಂತ್ರಜ್ಞರು ತಾವು ನಿರ್ಮಿಸುವ ಯಂತ್ರಗಳಲ್ಲಿ ಮಾನವೀಯತೆ ಮತ್ತು ನೈತಿಕತೆಯ ಆತ್ಮವನ್ನು ತುಂಬಬೇಕು. ತಂತ್ರಜ್ಞಾನವು ಮಾನವನ ಸೇವೆಗೆ ಬಳಸಲ್ಪಡಬೇಕು ಅದು ಮಾನವನನ್ನು ಬದಲಿಸಲು ಅಲ್ಲ.” ವಿವೇಕಾನಂದರ ಚಿಂತನೆಗಳು ಕಾಲಾತೀತ.

ಅವರ ‘ಬಲ, ಶ್ರದ್ಧೆ ಮತ್ತು ಸೇವಾ ಮನೋಭಾವ’ ಎಂಬ ಸಂದೇಶವು ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು. ಇಂಜಿನಿಯರ್ ಆಗುವುದು ಕೇವಲ ವೃತ್ತಿಯ ವಿಷಯವಲ್ಲ, ಅದು ರಾಷ್ಟ್ರ ನಿರ್ಮಾಣದ ಧಾರ್ಮಿಕ ಕರ್ತವ್ಯವಾಗಿದೆ.
ಯಂತ್ರಗಳ ಹಿಂದೆ ನಿಂತಿರುವ ಮನುಷ್ಯನು ಮೌಲ್ಯಗಳಿಂದ ತುಂಬಿರಬೇಕು; ಆಗ ಮಾತ್ರ ತಂತ್ರಜ್ಞಾನವು ಆಶೀರ್ವಾದವಾಗುತ್ತದೆ, ಶಾಪವಾಗುವುದಿಲ್ಲ. ಆರ್ಥಿಕ ಅಭಿವೃದ್ಧಿಯ ಜೊತೆಗೆ ನೈತಿಕ ಅಭಿವೃದ್ಧಿಯೂ ಅಗತ್ಯ. ಇಲ್ಲದಿದ್ದರೆ ಸಮಾಜದಲ್ಲಿ ಅಸಮಾನತೆ ಮತ್ತು ಅಸ್ಥಿರತೆ ಉಂಟಾಗುತ್ತದೆ. ವಿವೇಕಾನಂದರು ಕನಸು ಕಂಡ ಶಕ್ತಿಶಾಲಿ, ಶ್ರದ್ಧಾವಂತ ಮತ್ತು ಸೇವಾಮನೋಭಾವ ಹೊಂದಿರುವ ಯುವ ಭಾರತವನ್ನು ತಂತ್ರಜ್ಞಾನ ಮತ್ತು ಮೌಲ್ಯಗಳ ಸಂಯೋಜನೆಯ ಮೂಲಕ ನಿರ್ಮಿಸಲು ಪ್ರತಿಯೊಬ್ಬ ಯುವಕನೂ ಕರ್ಮಯೋಗಿಯಾಗಬೇಕು.” ಎಂದು ಸ್ಯಾನ್ ಫ್ರಾನ್ಸಿಸ್ಕೊ, ವೇದಾಂತ ಸೊಸೈಟಿ ಆಫ್ ನಾರ್ದರ್ನ್ ಕ್ಯಾಲಿಫೋರ್ನಿಯಾದ ಮುಖ್ಯಸ್ಥರಾಗಿರುವ ಸ್ವಾಮಿ ತತ್ತ್ವಮಯಾನಂದಜಿ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತನೇ ಉಪನ್ಯಾಸದಲ್ಲಿ “21ನೇ ಶತಮಾನದ ಇಂಜಿನಿಯರ್‌ಗಾಗಿ ವಿವೇಕಾನಂದರು” ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ಮಂಗಳೂರು ಅಡ್ಯಾರಿನ, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಜರುಗಿತು.

ಈ ಸಂದರ್ಭದಲ್ಲಿ, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾಗಿರುವ ಸ್ವಾಮಿ ಜಿತಕಾಮಾನಂದಜಿ, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್‌ನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ, ಮಾಜಿ ಸೈನಿಕರಾದ ಬೆಳ್ಳಾಲ ಗೋಪಿನಾಥ್ ರಾವ್, ಡಾ. ಪ್ರಶಾಂತ್ ರಾವ್ ಡೀನ್, ವಿದ್ಯಾರ್ಥಿ ಕಲ್ಯಾಣ ಕಚೇರಿ ಮತ್ತು ವಿಜ್ಞಾನ ವಿಭಾಗದ ಮುಖ್ಯಸ್ಥರು ಮತ್ತು ನಿಖಿಲ್ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಹಾಗೂ ಉಪನ್ಯಾಸಕರು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್‌ನ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಮತ್ತು ಕಾರ್ಯಕ್ರಮ ಸಂಯೋಜಕಿಯಾದ ರಶ್ಮಿತಾ ಗಿರೀಶ್ ನಿಶಾಲ್ ವಂದಿಸಿದರು. ವಿದ್ಯಾರ್ಥಿ ಸಲಹೆಗಾರ್ತಿಯಾದ ಕಾವ್ಯ ಎಂ ಕಾರ್ಯಕ್ರಮವನ್ನು ನಿರೂಪಿಸಿದರು.

