ಮಂಗಳೂರು: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಫಾದರ್ ಮುಲ್ಲರ್ ಕಾಲೇಜು ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್, ಫಾದರ್ ಮುಲ್ಲರ್ ಔಷಧೀಯ ವಿಭಾಗದ ವತಿಯಿಂದ ಸಂಭ್ರಮದ ಕ್ರಿಸ್ಮಸ್ ಆಚರಣೆಯು ಡಿಸೆಂಬರ್ 17 ರ ಸಂಜೆ ಹೋಮಿಯೋಪಥಿ ಕಾಲೇಜಿನ ಮುಂಭಾಗ ಜರುಗಿತು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸರ್ಕಾರದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಂ.ಎ.ಗಫೂರ್ ಅವರು ಮಾತನಾಡಿ “ಕ್ರಿಸ್ಮಸ್ ಆಚರಣೆಯ ಮೂಲಕ ದೇರಳಕಟ್ಟೆಯ ಫಾದರ್ ಮುಲ್ಲರ್ ಸಂಸ್ಥೆಯು ಎಲ್ಲರನ್ನೂ ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ, ಸಮಾಜದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬಾಳಿದರೆ ಶಾಂತಿ, ಸೌಹಾರ್ದತೆ ಉಳಿಯುತ್ತದೆ, ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಾದರಿಯಾಗಿದೆ” ಎಂದವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಸತೀಶ್ ಶೆಟ್ಟಿಯವರು ಮಾತನಾಡಿ “ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಿಜಕ್ಕೂ ನನಗೆ ಸಂತೋಷ ತಂದಿದೆ, ಇಂತಹ ಸೌಹಾರ್ದ ಕ್ರಿಸ್ಮಸ್ ಆಚರಣಾ ಕಾರ್ಯಕ್ರಮಗಳು ನಮ್ಮೆಲ್ಲರಲ್ಲೂ ಪ್ರೀತಿ, ವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಲು ಪ್ರೇರೆಪಿಸುತ್ತದೆ.

ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜು ಹಾಗೂ ಆಸ್ಪತ್ರೆಯ ವತಿಯಿಂದ ಸಮುದಾಯ ಮಟ್ಟದಲ್ಲಿ ಆಯೋಜಿಸಲಾದ ವೈದ್ಯಕೀಯ ಶಿಬಿರ ಮತ್ತು ಕಾರ್ಯಕ್ರಮಗಳಿಗೆ ಸಹಕರಿಸಿದವರನ್ನು ಕೂಡ ಇಲ್ಲಿ ಗುರುತಿಸಿ ಅಭಿನಂದಿಸಿದ್ದು ಈ ಕಾರ್ಯಕ್ರಮಕ್ಕೆ ಹೆಚ್ಚು ಮೆರುಗನ್ನು ತಂದಿದೆ” ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂ.ಫಾ.ಫೌಸ್ಟಿನ್ ಲೂಕಾಸ್ ಲೋಬೋರವರು “ಮನುಷ್ಯರು ಪರಸ್ಪರ ಅನ್ಯೋನ್ಯತೆಯಿಂದ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುತ್ತಾ ಪರೋಪಕಾರಿಯಾಗಿ ಜೀವಿಸಬೇಕೆಂದು ಯೇಸು ಕ್ರಿಸ್ತರ ಸಂದೇಶವಾಗಿದೆ, ಎಲ್ಲಾ ಧರ್ಮಗಳು ಕೂಡ ಇದೇ ಸಂದೇಶವನ್ನು ಸಾರಿದೆ. ಇಲ್ಲಿ ಸರ್ವರೂ ಜತೆಗೂಡಿ ಆಚರಿಸುತ್ತಿರುವ ಈ ಕ್ರಿಸ್ಮಸ್ ಸಂಭ್ರಮಾಚರಣೆಯು ಉತ್ತಮ ಸಮಾಜಕ್ಕೆ ಒಂದು ಹಾದಿಯಾಗಿದೆ” ಎಂದವರು ವಿಶ್ಲೇಷಿಸಿದರು.
ಈ ವೇಳೆ ಎಂ.ಎ.ಗಫೂರ್ ಹಾಗೂ ದಿವ್ಯಾ ಸತೀಶ್ ಶೆಟ್ಟಿ ಅವರನ್ನು ದೇರಳಕಟ್ಟೆ ಫಾದರ್ ಮುಲ್ಲರ್ ಸಂಸ್ಥೆಗಳ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವತಿಯಿಂದ ಆಯೋಜಿಸಲಾದ ವೈದ್ಯಕೀಯ ಶಿಬಿರಗಳು, ಇತರೆ ಸಾಮುದಾಯಿಕ ಕಾರ್ಯಕ್ರಮಗಳಿಗೆ ಸಹಕರಿಸಿದ ಪ್ರಮುಖರನ್ನು ಗುರುತಿಸಿ ಅಭಿನಂದಿಸಲಾಯಿತು.
ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಇ.ಎಸ್.ಜೆ.ಪ್ರಭುಕಿರಣ್, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಸತೀಶ್, ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಗಿರೀಶ್ ನಾವಡ, ಹೋಮಿಯೋಪಥಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ವಿಲ್ಮಾ ಮೀರಾ ಡಿ’ಸೋಜರವರು ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ಔಷಧೀಯ ವಿಭಾಗದ ಆಡಳಿತಾಧಿಕಾರಿಗಳಾದ ವಂ.ಫಾ.ನೆಲ್ಸನ್ ಧೀರಜ್ ಪಾಯಸ್ ರವರು ಸ್ವಾಗತಿಸಿ, ಹೋಮಿಯೋಪಥಿ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಫಾರ್ಮಸಿ ಕಾಲೇಜಿನ ಆಡಳಿತಾಧಿಕಾರಿಗಳಾದ ವಂ.ಫಾ.ಡೊನಾಲ್ಡ್ ನಿಲೇಶ್ ಕ್ರಾಸ್ತಾರವರು ಧನ್ಯವಾದಗಳನ್ನು ಸಲ್ಲಿಸಿದರು.
ಸಭಾ ಕಾರ್ಯಕ್ರಮದ ನಂತರ ಫಾದರ್ ಮುಲ್ಲರ್ ದೇರಳಕಟ್ಟೆ ಕ್ಯಾಂಪಸ್ ನ ಪ್ರಾಧ್ಯಾಪಕರಿಂದ, ವಿದ್ಯಾರ್ಥಿಗಳಿಂದ ಹಾಗೂ ಸಿಬ್ಬಂದಿಗಳಿಂದ ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿತು.

