ಮಂಗಳೂರು: “ಯಾವ ಶಿಕ್ಷಣಕ್ಕೆ ಜನಸಾಧಾರಣರನ್ನು ಜೀವನ ಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದಕ್ಕಾಗುವುದಿಲ್ಲವೊ, ಯಾವುದು ಮನುಷ್ಯನಿಗೆ ಚಾರಿತ್ರ‍್ಯಬಲ, ಸೇವಾತತ್ಪರತೆ, ಸಿಂಹಸಾಹಸಿಕತೆ ಇವುಗಳನ್ನು ಒದಗಿಸುವುದಿಲ್ಲವೊ ಅದು ಶಿಕ್ಷಣ ಎಂಬ ಹೆಸರಿಗೆ ಯೋಗ್ಯವೇನು? ಜೀವನದಲ್ಲಿ ವ್ಯಕ್ತಿ ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳುವ ಸಾಮರ್ಥ್ಯವನ್ನು ಯಾವುದು ನೀಡುವುದೋ ಅದೇ ನಿಜವಾದ ಶಿಕ್ಷಣ” ಎಂದು ಸ್ವಾಮಿ ವಿವೇಕಾನಂದರು ಹೇಳಿದರು.

ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಮಾಡುವ ಹಾಗೂ ಜೀವನ ಸಂಗ್ರಾಮಕ್ಕೆ ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿ ಮಾಡುವ ಆಶಯವನ್ನು ಸಾಕಾರಗೊಳಿಸಲು ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ಬಾಲಕಾಶ್ರಮವು 1951 ರಲ್ಲಿ ಮಂಗಳಾದೇವಿಯಲ್ಲಿ ಆರಂಭಗೊಂಡಿತು.

ಗ್ರಾಮೀಣ ಪ್ರದೇಶದ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಆರಂಭಗೊಂಡ ಬಾಲಕಾಶ್ರಮವು ಕಳೆದ 75 ವರ್ಷಗಳಿಂದ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ. ಇಂದು ನಮ್ಮ ಹಳೆ ವಿದ್ಯಾರ್ಥಿಗಳು ಹಲವಾರು ಪ್ರತಿಷ್ಠಿತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಮಕೃಷ್ಣ ಮಿಷನ್ ಬಾಲಕಾಶ್ರಮದಲ್ಲಿ, ಆಶ್ರಮದ ವಾತಾವರಣದಲ್ಲಿ, ಸ್ವಾಮೀಜಿಯವರ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದುವರಿಯಲು ತರಬೇತಿ ನೀಡಲಾಗುತ್ತದೆ. ಶಿಕ್ಷಣ, ಊಟ, ವಸತಿಗಳನ್ನು ಉಚಿತವಾಗಿ ಒದಗಿಸುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ಅವಶ್ಯಕವಾದ ಎಲ್ಲಾ ಕೆಲಸಗಳನ್ನು ಕಲಿಯುವುದರೊಂದಿಗೆ ಅವರ ಸರ್ವತೋಮುಖ ಬೆಳವಣಿಗೆಗೆ ಅವಕಾಶ ನೀಡಲಾಗುತ್ತದೆ.

7 ನೇ ತರಗತಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ, ಗಂಡು ಮಕ್ಕಳು ಮಾತ್ರ ಅರ್ಜಿಯನ್ನು ಇಲ್ಲಿಗೆ ಸಲ್ಲಿಸಬಹುದು. 8 ನೇ ತರಗತಿಗೆ ಮಾತ್ರ ಪ್ರವೇಶ ನೀಡುವುದಾಗಿದ್ದು ಮೊದಲ ಆದ್ಯತೆಯನ್ನು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಜನವರಿ 25 2026, ಆದಿತ್ಯವಾರ, ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನಿಯಮಾವಳಿ ಪ್ರತಿಗಾಗಿ ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಕಚೇರಿಯನ್ನು 0824-241 4216, +91 90196 29023 ಈ ಸಂಖ್ಯೆಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 10 ರವರೆಗೆ ಮತ್ತು ಸಂಜೆ 4 ರಿಂದ 6 ಗಂಟೆಯವರೆಗೆ ಸಂಪರ್ಕಿಸಬಹುದು.