ಉಡುಪಿ: ಮೂಡಬಿದರೆಯ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗವು, ಮಲ್ಪೆಯ ಟೀಮ್ ಈಶ್ವರ ಮಲ್ಪೆ ತಂಡದ ಸಹಯೋಗ ಹಾಗೂ ಸಮಾಜಕಾರ್ಯ ವಿಭಾಗದ ಹಳೆವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಇದೇ ಎ.25ರಂದು ಶನಿವಾರ ಮಲ್ಪೆ ಕಡಲಕಿನಾರೆಯಲ್ಲಿ ‘ಆಳ್ವಾಸ್ ರೀಚ್-2026’ ಎಂಬ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ ಎಂದು ಸಮಾವೇಶದ ಸಂಯೋಜಕ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಕೃಷ್ಣಮೂರ್ತಿ ಬಿ. ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸೋಶಿಯಲ್ ವರ್ಕ್ ಫಾರ್ ಅಡ್ರೆಸಿಂಗ್ ಯೂತ್ ಎಟ್ ರಸ್ಕ್ (ಅಪಾಯದಲ್ಲಿರುವ ಯುವಜನತೆಯ ಸಮಸ್ಯೆಗೆ ಸ್ಪಂಧಿಸುವಲ್ಲಿ ಸಮಾಜಕಾರ್ಯ) ಘೋಷವಾಕ್ಯದೊಂದಿಗೆ ಈ ಸಮಾವೇಶ ನಡೆಯಲಿದೆ ಎಂದರು.

ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಮಾಜಕಾರ್ಯ ವಿಭಾಗ ತನ್ನ ಬೆಳ್ಳಿಹಬ್ಬ ವರ್ಷಾಚರಣೆಯ ಪ್ರಯುಕ್ತ ಟೀಮ್ ಈಶ್ವ‌ರ್ ಮಲ್ಪೆ ತಂಡ ಮುಖ್ಯಸ್ಥರಾದ ಈಶ್ವರ ಮಲ್ಪೆ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನಿಯೋಜಿಸಿದೆ. ಎ.25ರಂದು ಬೆಳಗ್ಗೆ ರಾಜ್ಯದ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ವಿಚಾರಗೋಷ್ಠಿ ಜಾಗೃತಿ ಜಾಥಾ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ತಿಳಿಸಿದರು.

ಸಮಾವೇಶದ ಉದ್ಘಾಟನೆ ಎ.25ರಂದು ಬೆಳಗ್ಗೆ 10:30ಕ್ಕೆ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಈಶ್ವರ ಮಲ್ಪೆ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು ಎಂದು ವಿವರಿಸಿದರು.ಬಳಿಕ ವಿವಿಧ ವಿಷಯಾಧಾರಿತ ವಿವಿಧ ಸ್ಪರ್ಧೆಗಳು ಕಾಲೇಜು ವಿದ್ಯಾರ್ಥಿ ಗಳಿಗಾಗಿ ನಡೆಯಲಿವೆ. ಸಂಜೆ 4:00ಗಂಟೆಗೆ ಜಾಗೃತಿ ಜಾಥಾ ಮಲ್ಪೆ ಜೂನಿಯರ್ ಕಾಲೇಜಿನಿಂದ ಮಲ್ಪೆ ಕಿನಾರೆಯ ಗಾಂಧಿ ಪ್ರತಿಮೆಯವರೆಗೆ ನಡೆಯಲಿದೆ. 5ಗಂಟೆಗೆ ಕಲಾವತಿ ದಯಾನಂದ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮವಿರುತ್ತದೆ ಎಂದರು.

ಸಂಜೆ 6:30ರಿಂದ ಸಮಾರೋಪ ಸಮಾರಂಭ ಮಲ್ಪೆ ಕಡಲ

ಕಿನಾರೆಯಲ್ಲಿ ನಡೆಯಲಿದೆ. ಇದರಲ್ಲಿ ನೂತನ ಅಂಬುಲೆನ್ಸ್ ವಾಹನವನ್ನು ಈಶ್ವರ ಮಲ್ಪೆ ತಂಡಕ್ಕೆ ಹಸ್ತಾಂತರ, ಸನ್ಮಾನ, ಸಮಾರೋಪ ನಂತರ ಗೋಳಿಯಂಗಡಿಯ ಕಲಾಶ್ರಿ ನಾಟ್ಯಾಲಯದಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದು ಕೃಷ್ಣಮೂತಿ ತಿಳಿಸಿದರು.

ಸಮಾರೋಪ ಸಮಾರಂಭವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಇದರಲ್ಲಿ ಶಾಸಕ ಯಶಪಾಲ್ ಸುವರ್ಣ, ಉದ್ಯಮಿಗಳಾದ ಆನಂದ ಸಿ.ಕುಂದರ್, ಪ್ರಸಾದ್‌ರಾಜ್‌ ಕಾಂಚನ್, ರಘುಪತಿ ಭಟ್, ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಆಚಾರ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್‌ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲಾ ಕೆ., ಈಶ್ವರ ಮಲ್ಪೆ ಉಪಸ್ಥಿತರಿದ್ದರು.