ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಹಳೆವಿದ್ಯಾರ್ಥಿಗಳ ಸಂಘದ ವತಿಯಿಂದ, ವೈವಿಧ್ಯಮಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಯುವ ಸಾಧಕರನ್ನು ಗುರುತಿಸಿ, ಅವರ ಅನುಕರಣೀಯ ಪ್ರಯಾಣದ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ನೀಡಲಾಗುವ “ಅಲೋಶಿಯಸ್ ಯುವ ಐಕಾನ್” ಪ್ರಶಸ್ತಿ ಪ್ರದಾನ ಸಮಾರಂಭವು 16 ಫೆಬ್ರವರಿ 2026 ರಂದು ಅಲೋಶಿಯಸ್ ವಿವಿಯ ಎಲ್ ಎಫ್ ರಸ್ಕೀನ್ಹಾ ಹಾಲ್‌ನಲ್ಲಿ ನಡೆಯಿತು.

ಈ ಪ್ರಶಸ್ತಿಯನ್ನು ವೃತ್ತಿಪರ ಶ್ರೇಷ್ಠತೆಯನ್ನು ಪ್ರದರ್ಶಿಸಿದ, ಸಾಂಸ್ಥಿಕ ಮೂಲ ಮೌಲ್ಯಗಳನ್ನು ಎತ್ತಿಹಿಡಿದ ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಿದ ಯುವ ಹಳೆಯ ವಿದ್ಯಾರ್ಥಿಗಳನ್ನು ಗುರುತಿಸಿ ನೀಡಲಾಯಿತು.. ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಪಿಂಟೊ ಎಸ್‌ಜೆ; ಅಲೋಶಿಯಸ್ ವಿವಿಯ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್‌ಜೆ; ಎಸ್‌ಎಸಿಎಎ ಅಧ್ಯಕ್ಷ ಅನಿಲ್ ಕುಮಾರ್; ಕಾರ್ಯದರ್ಶಿ ಕಾನ್ರಾಡ್ ನಜರೆತ್; ಅಲೋಶಿಯಸ್ ಪಿಯು ಕಾಲೇಜಿನ ಪ್ರಾಂಶುಪಾಲ ರೆ. ಫಾ. ಕ್ಲಿಫರ್ಡ್ ಮತ್ತು ಯೂತ್ ಐಕಾನ್ 2026ರ ಸಂಚಾಲಕ ಕ್ಯಾಪ್ಟನ್ ಪ್ಯಾಟ್ರಿಕ್ ಪಾಯ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಧಕ ಹಳೆವಿದ್ಯಾರ್ಥಿಗಳಾದ ವಿಯಾನಿ ಆಂಟೋನಿಯೊ ಡಿ’ಕುನ್ಹಾ – ಅಂತರರಾಷ್ಟ್ರೀಯ ಚೆಸ್ ಮಾಸ್ಟರ್; ಶ್ರುತಿ ಮೆರಿನ್ ಲಾಲ್ – ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲಿ ವಿದ್ವಾಂಸೆ; ನಿನಾದ್ ಲಸ್ರಾದೊ – ವೈರಲ್ ಇಮ್ಯುನೊಲಾಜಿಸ್ಟ್; ಶ್ವೇತಾ ಅರೆಹೊಳೆ – ನೃತ್ಯ ಮತ್ತು ಪ್ರದರ್ಶನ ಕಲೆ; ಮಾನ್ವಿತಾ ಕಾಮತ್ – ನಟಿ ಮತ್ತು ಸಾಂಸ್ಕೃತಿಕ ಉದ್ಯಮಿ ಮುಂತಾದವರು ಈ ಬಾರಿಯ ಅಲೋಸಿಯನ್ ಯೂತ್ ಐಕಾನ್ – 2026 ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.