ಮಂಗಳೂರು: ಯೇನಪೋಯ (ಪರಿಗಣಿತ ವಿಶ್ವವಿದ್ಯಾಲಯ)ದ ಘಟಕ ಸಂಸ್ಥೆಯಾದ ‘ಯೇನಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ನ 7ನೇ ಪದವಿ ಪ್ರದಾನ ಸಮಾರಂಭದ ಮೊದಲ ದಿನದ ಕಾರ್ಯಕ್ರಮವು ದೇರಳಕಟ್ಟೆಯ ‘ಯೆಂಡ್ಯೂರೆನ್ಸ್ ಝೋನ್’ನಲ್ಲಿ ವಿಜೃಂಭಣೆಯಿಂದ ಜರುಗಿತು. ಸಮಾರಂಭದ ಮೊದಲ ದಿನದಂದು ಬಿಸಿಎ ವಿಭಾಗದ ಒಟ್ಟು 779 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಹಾಗೂ ಉಪಪ್ರಾಂಶುಪಾಲೆ ಪ್ರೊ. ಶರೀನಾ ಪಿ. ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು, “ನೀವಿಂದು ಅವಕಾಶಗಳ ಲೋಕಕ್ಕೆ ಕಾಲಿಡುತ್ತಿದ್ದೀರಿ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸಮಾಜವನ್ನು ವೇಗವಾಗಿ ಬದಲಾಯಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲಗಳ ಕುರಿತು ಜಾಗೃತರಾಗಿರಬೇಕು. ಎಐ ಅನ್ನು ಒಂದು ಸಹಕಾರಿ ಉಪಕರಣವಾಗಿ ಬಳಸಬೇಕೇ ಹೊರತು ಸಂಪೂರ್ಣವಾಗಿ ಅದರ ಮೇಲೆಯೇ ಅವಲಂಬಿತರಾಗಬಾರದು” ಎಂದರು.

ಮುಂದುವರಿದು ಮಾತನಾಡಿದ ಅವರು, “ಕೇವಲ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಜ್ಞಾನವಲ್ಲ, ವಿಷಯಗಳನ್ನು ಸ್ವತಂತ್ರವಾಗಿ ಯೋಚಿಸುವುದು, ವಿಮರ್ಶಿಸುವುದು ನಿಜವಾದ ಜ್ಞಾನ. ಕಂಪ್ಯೂಟರ್ ಹಾಗೂ ಬಿಸಿಎ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿದ್ದು, ವಿದ್ಯಾರ್ಥಿಗಳು ಉತ್ತಮ ಶ್ರೋತೃಗಳಾಗಿ ಎಲ್ಲರ ಮಾತುಗಳನ್ನು ಆಲಿಸುತ್ತಾ, ತಮ್ಮ ಜ್ಞಾನವನ್ನು ಸಮಾಜದ ಪ್ರತಿಯೊಬ್ಬರಿಗೂ ಉಪಕಾರವಾಗುವ ರೀತಿಯಲ್ಲಿ ಬಳಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದ ‘ಕಾಕುಂಜೆ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್’ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಗೋಪಾಲಕೃಷ್ಣ ಭಟ್ ಕಾಕುಂಜೆ ಮಾತನಾಡಿ, “ಪದವಿ ಸ್ವೀಕಾರ ಎಂಬುದು ಶಿಕ್ಷಣದ ಕೊನೆಯಲ್ಲ, ಅದು ಹೊಸ ಜೀವನದ ಆರಂಭ. ತಂತ್ರಜ್ಞಾನದ ಬದಲಾವಣೆಗಳು ನಮ್ಮ ಜೀವನವನ್ನು ಸುಲಭಗೊಳಿಸಿದರೂ, ಅವು ಮಾನವನ ಸ್ವಂತಿಕೆ ಹಾಗೂ ಚಿಂತನಾ ಶಕ್ತಿಯನ್ನು ಕೊಲ್ಲಬಾರದು. ಶೈಕ್ಷಣಿಕ ಅಂಕಗಳಿಗಿಂತ ಸೃಜನಶೀಲತೆ, ತಾರ್ಕಿಕ ಚಿಂತನೆ ವೃತ್ತಿಪರ ಶಿಸ್ತು ಮತ್ತು ಕೌಶಲಗಳು ಅತ್ಯಂತ ಮುಖ್ಯ” ಎಂದರು.

ವೇಗವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ನಿರಂತರ ಕಲಿಕೆ ಅಗತ್ಯ ಎಂದು ಪ್ರತಿಪಾದಿಸಿದ ಅವರು, “ವಿದ್ಯಾರ್ಥಿಗಳು ತಮ್ಮ ಅಪಾರ ಸಾಮರ್ಥ್ಯವನ್ನು ತಾಯಿಭೂಮಿ ಭಾರತದ ಸೇವೆಗೆ ನೀಡಬೇಕು ಹಾಗೂ ಹೆತ್ತ ತಂದೆ-ತಾಯಿ ಮತ್ತು ಗುರುಗಳನ್ನು ಎಂದಿಗೂ ಮರೆಯಬಾರದು” ಎಂದು ಕಿವಿಮಾತು ಹೇಳಿದರು.

ಮತ್ತೋರ್ವ ಗೌರವಾನ್ವಿತ ಅತಿಥಿ, ಯೇನಪೋಯ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರಾದ ಡಾ. ಬಿ. ಟಿ. ನಂದೀಶ್ ಮಾತನಾಡಿ, “ಪದವಿ ಎಂಬುದು ಕೇವಲ ಒಂದು ಪ್ರಮಾಣಪತ್ರವಲ್ಲ, ಅದೊಂದು ದೊಡ್ಡ ಜವಾಬ್ದಾರಿ. ವಿದ್ಯಾರ್ಥಿಗಳು ಸಮಾಜದಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳು ಹಾಗೂ ಸಾಹಚರ್ಯವನ್ನು ಮೈಗೂಡಿಸಿಕೊಳ್ಳಬೇಕು. ನೈತಿಕತೆಯಿಂದ ಸಾಧಿಸಿದ ಸಾಧನೆ ಮಾತ್ರ ಜೀವನದಲ್ಲಿ ಶಾಶ್ವತವಾಗಿ ಉಳಿಯುತ್ತದೆ” ಎಂದು ಶುಭ ಹಾರೈಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಜೀವನ್ ರಾಜ್ ಅವರು 2025–2026ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಸ್ಥೆಯ ಶೈಕ್ಷಣಿಕ ಬದ್ಧತೆಯನ್ನು ಉಲ್ಲೇಖಿಸಿದ ಅವರು, “ಈ ವರ್ಷ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಅತ್ಯುತ್ತಮ ರಾಜ್ಯಮಟ್ಟದ ಸಂಶೋಧನಾ ಪ್ರಬಂಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸುಮಾರು 6,000 ವಿದ್ಯಾರ್ಥಿಗಳು 45,000ಕ್ಕೂ ಹೆಚ್ಚು ಕೊರ್ಸೆರಾ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಕ್ರೀಡೆ, ಎನ್‌ಎಸ್‌ಎಸ್ ಹಾಗೂ ಯುವ ರೆಡ್ ಕ್ರಾಸ್ ಕ್ಷೇತ್ರಗಳಲ್ಲೂ ಸಂಸ್ಥೆಯು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದೆ” ಎಂದು ಹೆಮ್ಮೆಯಿಂದ ಹಂಚಿಕೊಂಡರು.

ಕಾರ್ಯಕ್ರಮದ ನಿರೂಪಣೆಯನ್ನು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಿನಾಕಿನಿ ಶೆಟ್ಟಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿಯರಾದ ಗ್ರೀಷ್ಮಾ ಪೂಜಾರಿ, ದೀಪಿಕಾ ಹಾಗೂ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೀಕ್ಷಿತಾ ನಡೆಸಿಕೊಟ್ಟರು. ಸಂಸ್ಥೆಯ ಉಪಪ್ರಾಂಶುಪಾಲರಾದ ಶ್ರೀ ನಾರಾಯಣ ಸುಕುಮಾರ ಎ. ಧನ್ಯವಾದ ಸಮರ್ಪಿಸಿದರು.ಮೂರನೇ ವರ್ಷದ ಬಿ.ಕಾಮ್ ವಿದ್ಯಾರ್ಥಿ ಮೊಹಮ್ಮದ್ ಯಾಸೀರ್ ಸುಲ್ತಾನ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪರೀಕ್ಷಾ ಸಹ-ನಿಯಂತ್ರಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪದವೀಧರರ ಪೋಷಕರು ಮತ್ತು ರಕ್ಷಕರು ಉಪಸ್ಥಿತರಿದ್ದರು. ಸಮಾರಂಭವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.