ಧಾರವಾಡ: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರೊಂದು ಹಣ್ಣಿನ ಅಂಗಡಿಗೆ ನುಗ್ಗಿದ ಬಳಿಕ ವ್ಯಕ್ತಿಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ನಗರದ ಕೃಷಿ ಇಲಾಖೆ ಎದುರಿಗೆ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಬಗ್ಗೆ ಗುರುತು ಪತ್ತೆ ಹಚ್ಚಲಾಗುತ್ತಿದೆ. ಮೃತ ವ್ಯಕ್ತಿಯು ಹಣ್ಣುಗಳ ಖರೀದಿ ಮಾಡಲೆಂದು ಅಂಗಡಿಗೆ ಬಂದಿದ್ದರು. ಇದೇ ಸಮಯಕ್ಕೆ ಧಾರವಾಡದಿಂದ ಬೆಳಗಾವಿ ಕಡೆ ಹೊರಟಿದ್ದ ಕಾರು ವೇಗವಾಗಿ ಬಂದು ಮೊದಲು ಮರಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಹಣ್ಣಿನ ಅಂಗಡಿಗೆ ಡಿಕ್ಕಿ ಹೊಡೆದು ವ್ಯಕ್ತಿಯ ಮೇಲೆ ಹರಿದಿದೆ. ಇದರಿಂದ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರು ಬೆಳಗಾವಿ ಮೂಲದ್ದು ಆಗಿದೆ.

ಘಟನೆಯಲ್ಲಿ ಹಣ್ಣಿನ ವ್ಯಾಪಾರಿಗೂ ಗಂಭೀರವಾದ ಗಾಯಗಳು ಆಗಿವೆ. ಅಲ್ಲದೇ ಕಾರು ಪಲ್ಟಿ ಹೊಡೆದಿದ್ದರಿಂದ ಒಳಗಿದ್ದವರಿಗೂ ಗಂಭೀರವಾದ ಗಾಯಗಳು ಆಗಿವೆ. ಗಾಯಾಳುಗಳನ್ನ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಓರ್ವನನ್ನ ಕಿಮ್ಸ್​ಗೆ ದಾಖಲು ಮಾಡಲಾಗಿದೆ. ಈ ಪ್ರಕರಣ ಸಂಚಾರ ಠಾಣೆಯಲ್ಲಿ  ದಾಖಲಾಗಿದೆ.