ಧಾರವಾಡ: ಧಾರವಾಡದ ಆಂಜನೇಯ ನಗರದ ತಂಗೆಮ್ಮ ಎಂಬಾಕೆಯನ್ನು ಕರೆದುಕೊಂಡು ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ತಂಗೆಮ್ಮ ವಾಸವಾಗಿದ್ದ ಮನೆಯ ಎದುರಿಗೆ ಬೆಳಗಾವಿ ಜಿಲ್ಲೆ ರಾಮದುರ್ಗದ ಮುನ್ನಾ ಎಂಬ ವ್ಯಕ್ತಿ ಬಂದು ಕಳೆದ ಆರು ತಿಂಗಳಿನಿಂದ ವಾಸವಾಗಿದ್ದ. ಬಾಡಿಗೆ ಮನೆ ಪಡೆದು ಅಲ್ಲೇ ವಾಸವಿದ್ದ. ಈ ವೇಳೆ ತಂಗೆಮ್ಮಳ ಪರಿಚಯ ಮಾಡಿಕೊಂಡ ಈತ ಆಕೆಯ ಜೊತೆ ಪ್ರೀತಿ, ಪ್ರೇಮದ ಕಥೆ ಕಟ್ಟಿ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ.
ಮುನ್ನಾಗೆ ಈಗಾಗಲೇ ಮದುವೆ ಆಗಿ ಎರಡು ಮಕ್ಕಳು ಸಹ ಇವೆ. ತಂಗೆಮ್ಮಳಿಗೂ ಮದುವೆಯಾಗಿದ್ದು, ಆಕೆಯನ್ನು ಇನ್ನೂ ಗಂಡನ ಮನೆಗೆ ಕಳುಹಿಸಿಕೊಟ್ಟಿರಲಿಲ್ಲ. ಜುಲೈ 11 ರಂದೇ ಉಪನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದರೂ ಇದುವರೆಗೂ ಆ ಇಬ್ಬರೂ ಪತ್ತೆಯಾಗಿಲ್ಲ. ಮುನ್ನಾ ತಂಗೆಮ್ಮಳ ತಾಯಿಯ ಬಳಿ ದುಡ್ಡು ಕೂಡ ಪಡೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಮುನ್ನಾನ ಮೇಲೆ ಅಪಹರಣದ ಕೇಸ್ ದಾಖಲಿಸದೇ ಕೇವಲ ಮಿಸ್ಸಿಂಗ್ ಕೇಸ್ ದಾಖಲಿಸಲಾಗಿದೆ. ಅಲ್ಲದೇ ಇದೊಂದು ಲವ್ ಜಿಹಾದ್ ಎಂದು ಪರಿಗಣಿಸಬೇಕು ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಒತ್ತಾಯಿಸಿ ಠಾಣೆ ಎದುರು ಪ್ರತಿಭಟನೆ ನಡೆಸಿದರು.

