ಧಾರವಾಡ: ಪ್ರತಿ ಗ್ರಾಮ ಮತ್ತು ನಗರದ ವಾರ್ಡ್ಗಳಲ್ಲಿ ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ, ಹಳೆಯದಾದ, ಕಚ್ಚಾ ಮತ್ತು ಸೋರುತ್ತಿರುವ ಮನೆಗಳ ಸಮೀಕ್ಷೆ ಮಾಡಿ, ಅಲ್ಲಿ ವಾಸವಿರುವ ಕುಟುಂಬಗಳಿಗೆ ಮುನ್ನೆಚ್ಚರಿಕೆ ನೀಡಬೇಕು. ಅಗತ್ಯವಿದ್ದಲ್ಲಿ ಸಮುದಾಯಭವನ ಅಥವಾ ಇತರ ಕಟ್ಟಡಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚಿನ ಸಮಸ್ಯೆ ಇದ್ದಲ್ಲಿ ಕಾಳಜಿ ಕೇಂದ್ರ ತೆರೆದು ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸಚಿವ ಸಂತೋಷ ಲಾಡ್ ಸೂಚನೆ ನೀಡಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಸೂಚನೆ ನೀಡಿದರು. ಅನೇಕ ವರ್ಷಗಳಿಂದ ಅರಣ್ಯ ಇಲಾಖೆ ವ್ಯಾಪ್ತಿಯ ಭೂಮಿಯಲ್ಲಿ ಬದುಕುತ್ತಿರುವ ಜನರಿಗೆ, ಅವರ ವಾಸದ ಮನೆಯ ಪಟ್ಟಾ ನೀಡಬೇಕು. ಅಧಿಕಾರಿಗಳು ಈ ಕುರಿತು ಕ್ರಮ ವಹಿಸಬೇಕು. ಈ ಕುರಿತು ಈಗಾಗಲೇ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜೂನ್ 1 ರಿಂದ ಜುಲೈ 30 ರವರೆಗೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ಒಂದು ಜೀವ ಹಾನಿ ಹಾಗೂ 1 ದೊಡ್ಡ ಜಾನುವಾರು ಹಾನಿ ಆಗಿದ್ದು, ನಿಯಮಾನುಸಾರ ತಕ್ಷಣ ಪರಿಹಾರ ವಿತರಿಸಲಾಗಿದೆ. ಅತಿ ಮಳೆಯಿಂದಾಗಿ 10 ಮನೆಗಳು ತೀವ್ರ ತರಹದಲ್ಲಿ ಮತ್ತು 433 ಮನೆಗಳು ಭಾಗಶಃ ಹಾನಿಯಾಗಿವೆ. ವಿಎ, ಪಿಡಿಓ ಮತ್ತು ಎಂಜಿನಿಯರ್ ಜಂಟಿಯಾಗಿ ಹಾನಿಯಾದ ಮನೆಗಳ ಸಮೀಕ್ಷೆ ಮಾಡುತ್ತಿದ್ದು, ತಹಶೀಲ್ದಾರರ ಮೂಲಕ ವರದಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

