ಧಾರವಾಡ : ಮದುವೆಯಾದ ಒಂದೇ ವರ್ಷಕ್ಕೆ ಹೆಂಡ್ತಿ ದಪ್ಪ ಇದ್ದಾಳೆ ಎಂದು ಆಕೆಯ ಉಸಿರನ್ನೇ ನಿಲ್ಲಿಸಿಬಿಟ್ಟ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ.

ಬಸವರಾಜ್ ವಡ್ಡರ್ ಎಂಬಾತ ತನ್ನ ಪತ್ನಿ ಪ್ರಿಯಾಂಕ ಕಮಲಾಕರ್ (29) ಎಂಬಾಕೆಯನ್ನ ಮನೆಯಲ್ಲೇ ಕೊಲೆ ಮಾಡಿದ್ದಾನೆ. ಹೆಂಡತಿ ದಪ್ಪ ಇದ್ದಾಳೆ ಅಂತಿದ್ದವನು ಇದೇ ಕಾರಣಕ್ಕೆ ಆಕೆಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.

2024ರಲ್ಲಿ ಬಸವರಾಜ್ ಎಂಬಾತ ಪತ್ನಿ ಪ್ರಿಯಾಂಕ ಕಮಲಾಕರ್ ಎಂಬುವವರನ್ನ ಮದುವೆಯಾಗಿದ್ದ. ಆರಂಭದಲ್ಲಿ ಪತ್ನಿ ಜೊತೆ ಚೆನ್ನಾಗಿದ್ದ ಬಸವರಾಜ್​ ಬಳಿಕ ನೀನು ದಪ್ಪ ಅಂತ ಹೆಂಡ್ತಿಗೆ ಕಿರುಕುಳ ಕೊಡಲು ಶುರು ಮಾಡಿದ್ದನಂತೆ. ನೀನು ತುಂಬಾ ದಪ್ಪ ಇದ್ದೀಯಾ, ಗರ್ಭಿಣಿ ಆಗೋಕೆ ಸಾಧ್ಯವಿಲ್ಲ ಕಿರುಕುಳ ಕೊಡ್ತಿದ್ದ ಪಾಪಿ ಗಂಡ ಈಗ ಆಕೆಯ ಜೀವವನ್ನೇ ತೆಗೆದಿದ್ದಾನೆ.

ಹೆಂಡ್ತಿ ದಪ್ಪ ಇದ್ದಾಳೆ, ಗರ್ಭಿಣಿ ಆಗ್ತಿಲ್ಲ ಅಂತ ಆಕೆಯ ಕತ್ತು ಹಿಸುಕಿ ಬಸವರಾಜ್ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಸೋಮವಾರ ರಾತ್ರಿ ಅಂದ್ರೆ ಕಳೆದ ಎರಡು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಪತಿ ಬಸವರಾಜ್, ರೇಣವ್ವ, ಸುಭಾಷ್, ಸಿದ್ದರಾಮೇಶ್ ಎಂಬ ಆರೋಪಿಗಳನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ.