ದಾವಣಗೆರೆ: ಸಹಶಿಕ್ಷಕರೊಂದಿಗೆ ಉಂಟಾಗಿದ್ದ ಕಲಹದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜಯಪ್ಪ (55) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ.
ಶಾಲೆಯಲ್ಲಿ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರ ನಡುವೆ ಉಂಟಾಗಿದ್ದ ಜಗಳದ ಹಿನ್ನೆಲೆಯಲ್ಲಿ, ನಿನ್ನೆ ಬಿಆರ್‌ಸಿ ಹಾಗೂ ಎಸ್‌ಡಿಎಂಸಿ ನೇತೃತ್ವದಲ್ಲಿ ಶಾಂತಿಸಭೆ ಕರೆಯಲಾಗಿತ್ತು. ಸಭೆ ನಡೆಯುತ್ತಿದ್ದ ಮಧ್ಯದಲ್ಲೇ ತೀವ್ರವಾಗಿ ಮನನೊಂದ ಜಯಪ್ಪ ಅವರು, ಶೌಚಾಲಯಕ್ಕೆ ತೆರಳಿ ವಿಷ ಸೇವಿಸಿದ್ದರು.
ಕೂಡಲೇ ಸ್ಥಳೀಯರು ಅವರನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಸ್ಥಳೀಯ ಪೊಲೀಸರು ಈ ಸಂಬಂಧ ಕೇಸ್ ದಾಖಲು ಮಾಡಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

