ದಾವಣಗೆರೆ : ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಅನ್ನು ಕಚ್ಚಿದ ಸಾಕುನಾಯಿಯೊಂದು ಸ್ಥಳದಲ್ಲೇ ಭೀಕರವಾಗಿ ಸ್ಫೋಟಗೊಂಡು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಸಾಕುನಾಯಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಗಮನಿಸಿ, ಅದರಲ್ಲಿ ಆಹಾರ ಇರಬಹುದೆಂದು ಕಚ್ಚಲು ಪ್ರಯತ್ನಿಸಿದೆ. ಆದರೆ, ಆ ಕವರ್ನೊಳಗೆ ಕಾಡುಹಂದಿ ಮತ್ತಿತರ ಪ್ರಾಣಿಗಳನ್ನು ಬೇಟೆಯಾಡಲು ಇಡುವ ನಾಡಬಾಂಬ್ ಮಾದರಿಯ ಅಪಾಯಕಾರಿ ಸ್ಫೋಟಕಗಳನ್ನು ಬಚ್ಚಿಡಲಾಗಿತ್ತು ಎನ್ನಲಾಗಿದೆ.
ನಾಯಿ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ನಾಯಿಯ ಮುಖ ಮತ್ತು ದೇಹದ ಭಾಗಗಳು ಛಿದ್ರಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ. ಸ್ಫೋಟದ ಸದ್ದಿಗೆ ಸುತ್ತಮುತ್ತಲಿನ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ಇಂತಹ ಸ್ಫೋಟಕಗಳು ಬಿದ್ದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

