ದಾವಣಗೆರೆ : ಕಸ ವಿಂಗಡಿಸಿ ಕೊಡುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆಯೊಂದು ದಾವಣಗೆರೆ ಜಿಲ್ಲೆಯ ಮೆಹಬೂಬ್ ನಗರದಲ್ಲಿ ನಡೆದಿದೆ.

ದಾವಣಗೆರೆಯಲ್ಲಿ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದ ಅಜ್ಜು ಮತ್ತು ನೂರ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಹಸಿ ಕಸ, ಒಣ ಕಸ ವಿಂಗಡಿಸಿ ಹಾಗೂ ಮಗುವಿನ ಡೈಪರ್ ಕವರ್​ಗೆ ಹಾಕಿಕೊಡಿ ಎಂದಿದ್ದಕ್ಕೆ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿ ಆರೋಪಿಗಳು ಅಟ್ಟಹಾಸ ಮೆರೆದರು. ಪೌರ ಕಾರ್ಮಿಕರು ಬೆಳಗ್ಗೆ ಕಸ ಸಂಗ್ರಹಿಸಲು ವಾಹನದೊಂದಿಗೆ ಮೆಹಬೂಬ್ ನಗರಕ್ಕೆ ಹೋಗಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಹಸಿ, ಕಸ ಹಾಗೂ ಒಣ ಕಸವನ್ನು ಜತೆಗೇ ತಂದಿದ್ದಾನೆ.

ಇದೇ ವೇಳೆ ಮಹಿಳೆಯೊಬ್ಬರು ಕಸದೊಂದಿಗೆ ಮಗುವಿನ ಡೈಪರ್ ಕೂಡ ತಂದಿದ್ದಾರೆ. ಈ ವೇಳೆ ಪೌರ ಕಾರ್ಮಿಕರು ‘ಮಗುವಿನ ಡೈಪರ್ ಅನ್ನು ಪ್ರತ್ಯೇಕವಾಗಿ ಕೊಡಿ’ ಎಂದು ಕೇಳಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ಪೌರಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ತಿರುಗಿದೆ. ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ.ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿಗಳು ಕಸದ ವಾಹನ ಚಾಲಕ ಕರಿಬಸಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಪುಂಡರು, ಕರಿಬಸಪ್ಪ ಅವರ ಟೀ ಶರ್ಟ್ ಹರಿದು ಹಾಕಿ ಎಳೆದಾಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದೇ ಸ್ಥಳದಲ್ಲಿದ್ದ ಪೌರಕಾರ್ಮಿಕ ಮಹಿಳೆ ರಾಜೇಶ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಹಲ್ಲೆ ಮಾಡಿದ ಅರೋಪಿಗಳನ್ನು ಬಂಧನ ಮಾಡುವವರೆಗೂ ಸ್ಥಳದಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಮ್ಮ ಮೇಲೆ ಪದೇ ಪದೇ ಹಲ್ಲೆಯಾಗುತ್ತಿದೆ. ನಮಗೆ ಭದ್ರತೆ ಇಲ್ಲದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘04ನೇ ವಾರ್ಡ್ ಮೆಹಬೂಬ್ ನಗರದಲ್ಲಿ ನಾವು ಕೆಲಸ ಮಾಡುತ್ತೇವೆ. ಹಸಿ ಕಸ ಒಣ ಕಸ ಬೇರ್ಪಡಿಸಬೇಕು ಎಂಬ ಕಾನೂನು ಇದೆ. ಅದನ್ನು ಬೇರ್ಪಡಿಸದೇ ಕಸ ಕೊಟ್ಟು ಹಲ್ಲೆ ಮಾಡಿದ್ದಾರೆ. ಎಲ್ಲ ರೀತಿಯ ಮಿಶ್ರಿತ ಕಸ ಅವರು ನೀಡಿದ ಚೀಲದಲ್ಲಿತ್ತು’ ಎಂದು ಹಲ್ಲೆಗೆ ಒಳಗಾದ ಕರಿಬಸಪ್ಪ ಹೇಳಿದ್ದಾರೆ.ಪ್ರಕರಣದ ಗಂಭೀರತೆ ಅರಿತ ಆಜಾದ್ ನಗರ ಠಾಣೆ ಪಿಐ ವಸಂತ್ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಅಜ್ಜು ಮತ್ತು ನೂರ್ ಎಂಬುವರಿಂದ ಪೌರ ಕಾರ್ಮಿಕನ ಮೇಲೆ ಹಲ್ಲೆ ಆಗಿದೆ. ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಹಲ್ಲೆಗೆ ಒಳಗಾದ ಕರಿಬಸಪ್ಪ ದೂರು ನೀಡಿದ್ದರು. ಇಬ್ಬರನ್ನು ಬಂಧಿಸಿದ್ದೇವೆ. ಇದರ ಸಂಬಂಧ ಎಫ್ಐಆರ್ ಆಗಿದೆ’ ಎಂದು ಆಜಾದ್ ನಗರ ಠಾಣೆಯ ಪಿಐ ವಸಂತ್​ ತಿಳಿಸಿದ್ದಾರೆ.