ಬೆಂಗಳೂರು: ದಾವಣಗೆರೆ ಅಂದರೆ ಮೊದಲು ನೆನಪಾಗೋದೆ ಬೆಣ್ಣೆದೋಸೆ. ಇಲ್ಲಿನ ದೋಸೆ ರಾಜ್ಯ ಅಲ್ಲದೆ, ಇಡೀ ದೇಶಾದ್ಯಂತ ಪ್ರಸಿದ್ಧಿಯಾಗಿದೆ. ಅಲ್ಲದೆ, ಹೊರಗಿನಿಂದ ಯಾರೇ ಈ ಜಿಲ್ಲೆಗೆ ಎಂಟ್ರಿ ಕೊಟ್ಟರೂ, ಇಲ್ಲಿನ ಬೆಣ್ಣೆದೋಸೆ ಸವಿಯದೇ ವಾಪಾಸ್‌ ಆಗುವುದಿಲ್ಲ.

ಅಷ್ಟರ ಮಟ್ಟಿಗೆ ಪ್ರಖಾತಿಯಾಗಿದ್ದರೂ, GI ಟ್ಯಾಗ್ ನಿಡಲು ಕೇಂದ್ರ ನಿರಾಕರಿಸಿದೆ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಬೆಣ್ಣೆ ದೋಸೆಗೆ ಇದೀಗ ಭೌಗೋಳಿಕ ಸೂಚಕ ಟ್ಯಾಗ್‌ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿರುವುದೇ ಅಸಮಾಧನದ ಸಂಗತಿಯಾಗಿದೆ.

ಇದಕ್ಕೆ ಕೇಂದ್ರ ನೀಡಿರುವ ಕಾರಣ ನೋಡುವುದಾದರೇ, ದಾವಣಗೆರೆಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸದನದಲ್ಲಿ ಕೋರಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್, “ದಾವಣಗೆರೆ ಬೆಣ್ಣೆದೋಸೆ ಹೆಚ್ಚು ಜನಪ್ರಿಯ ಆಗಿದೆ. ಆದರೆ, ಕರ್ನಾಟಕ, ದಾವಣಗೆರೆ ಹೊರಗಿನ ಪ್ರದೇಶಗಳನ್ನು ಒಳಗೊಂಡಂತೆ ಇತರೆ ಪ್ರದೇಶದಲ್ಲೂ ವ್ಯಾಪಕವಾಗಿ ಸಿಗುವ ಈ ದೋಸೆ ಸಾಮಾನ್ಯ ವಸ್ತುವಾಗಿದೆ” ಎಂದು ಉತ್ತರವನ್ನು ನೀಡಿದ್ದಾರೆ.

ಜಿಐ ಟ್ಯಾಗ್‌ಗೆ ಅಗತ್ಯ ಇರುವ ವಿಶಿಷ್ಟತೆಯು ಕಡಿಮೆಯಾಗಿದೆ, ಯಾಕೆಂದರೆ ಈ ದೋಸೆಯನ್ನು ಇದೀಗ ದೇಶಾದ್ಯಂತ ತಯಾರು ಮಾಡಲಾಗುತ್ತಿದೆ. ಆದ್ದರಿಂದ ಅದರ ವಿಶಿಷ್ಟ ಪ್ರಾದೇಶಿಕ ಗುರುತನ್ನು ಕಳೆದುಕೊಳ್ಳುತ್ತದೆ. ಇನ್ನು ಇದು GI ಟ್ಯಾಗ್‌ಗೆ ಅರ್ಹತೆ ಪಡೆಯಲು, ನಿರ್ದಿಷ್ಟ ಪ್ರದೇಶಕ್ಕೆ ವಿಶಿಷ್ಟವಾಗಿರಬೇಕು ಎಂದು ಹೇಳಿದ್ದಾರೆ.

ನಿರ್ದಿಷ್ಟ ಉತ್ಪಾದನಾ ಪ್ರಕ್ರಿಯೆಗಳು, ಹವಾಮಾನ ಪರಿಸ್ಥಿತಿಗಳು ಮತ್ತು ಸ್ಥಳೀಯ ಪದಾರ್ಥಗಳನ್ನು ಹೊಂದಿರುತ್ತದೆ. ಆ ಉತ್ಪನ್ನ ಪುರಾತನ ದಾಖಲಿತ ಇತಿಹಾಸವನ್ನು ಹೊಂದಿರಬೇಕು. ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರಬೇಕು ಎಂದು ಸಚಿವರು ತಿಳಿಸಿದ್ದಾರೆ.