ದಾವಣಗೆರೆ: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ (ರಿ.) ಬೆಂಗಳೂರು ಮತ್ತು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ 30ನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಆದಿವಾಸಿ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭವು ದಾವಣಗೆರೆಯ ಮಲ್ಲಿಕಾರ್ಜುನ ಕಲ್ಯಾಣ ಮಂದಿರದಲ್ಲಿ ನಡೆಯಿತು. ಆದಿವಾಸಿ ಸಿರಿ ಪ್ರಶಸ್ತಿಯನ್ನು ಕೊರಗ ಸಮುದಾಯದವರಾದ ಡಾಕ್ಟರ್ ಸಬಿತಾ ಗುಂಡ್ಮಿ , ಡಾಕ್ಟರ್ ದಿನಕರ ಕೆಂಜೂರು ಮತ್ತು ಡಾಕ್ಟರ್ ಕಲಾವತಿ ಸೂರಾಲು ರವರು ಸ್ವೀಕರಿಸಿದರು.

ಡಾಕ್ಟರ್ ಸಬಿತಾ ಗುಂಡ್ಮಿ ಯವರು ಪಿ.ವಿ.ಟಿ.ಜಿ ಬುಡಕಟ್ಟು ಸಮುದಾಯದ ಮಹಿಳೆಯರಲ್ಲಿ ಡಾಕ್ಟರೇಟ್ ಪದವಿ ಪಡೆದವರಲ್ಲಿ ಪ್ರಥಮ ಮಹಿಳೆಯಾಗಿರುತ್ತಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಗುಂಡ್ಮಿ , ಹೈಸ್ಕೂಲ್ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಬ್ರಹ್ಮಾವರ, ಪದವಿ ಪೂರ್ವ ಶಿಕ್ಷಣವನ್ನು ಸೈಂಟ್ ಮೇರಿಸ್ ಕಾಲೇಜು ಶಿರ್ವ ಮತ್ತು ಪದವಿ ಶಿಕ್ಷಣವನ್ನು ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರಿನಲ್ಲಿ ಮುಗಿಸಿದರು. ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಎಂ.ಎ ಪದವಿಯನ್ನು ದ್ವಿತೀಯ ರ್ಯಾಂಕ್ ನೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಮುಗಿಸಿರುತ್ತಾರೆ. ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್. ಜೋಗನ್ ಶಂಕರ್ ರವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು.

ಪ್ರಸ್ತುತ ಡಾಕ್ಟರ್ ಸಬಿತಾ ಗುಂಡ್ಮಿ ಯವರು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ದಿನಕರ ಕೆಂಜೂರು ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶ್ರೀ ವೀರೇಶ್ವರ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಕೆಂಜೂರು, ಹೈಸ್ಕೂಲ್ ಮತ್ತು ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ಕರಣೆಯಲ್ಲಿ ಪೂರೈಸಿರುತ್ತಾರೆ. ಪದವಿ ಶಿಕ್ಷಣವನ್ನು ಸೈಂಟ್ ಮೇರಿಸ್ ಕಾಲೇಜು ಶಿರ್ವದಲ್ಲಿ ಮುಗಿಸಿರುತ್ತಾರೆ. ನಂತರ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಎo.ಕಾo ಪದವಿ ಪಡೆದಿರುತ್ತಾರೆ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಎಂ.ಬಿ.ಎ ಪದವಿಯನ್ನು ಪಡೆದಿರುತ್ತಾರೆ ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊಫೆಸರ್ ಪಿ.ಎಸ್.ಯಡಪಡಿತ್ತಾಯರವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಡಾಕ್ಟರ್ ದಿನಕರ ಕೆಂಜೂರುರವರು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗದ ದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾಕ್ಟರ್ ಕಲಾವತಿ ಸೂರಾಲು ರವರು ಪ್ರಾಥಮಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ಸೂರಾಲಿನಲ್ಲಿ , ಪ್ರೌಢಶಾಲಾ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ಕರಣೆ ಮತ್ತು ಸೈಂಟ್ ಮೇರಿಸ್ ಕಾಲೇಜು ಶಿರ್ವದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿರುತ್ತಾರೆ. ಪದವಿ ಶಿಕ್ಷಣವನ್ನು ರೋಶನಿ ನಿಲಯ ಮಂಗಳೂರಿನಲ್ಲಿ ಮುಗಿಸಿರುತ್ತಾರೆ. ನಂತರ ಹಂಪಿ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ಅಧ್ಯಯನ ಮತ್ತು ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಡಾಕ್ಟರ್ ಕಲಾವತಿ ಸೂರಾಲುರವರು ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
30ನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಆದಿವಾಸಿ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದ ವೇದಿಕೆಯಲ್ಲಿ ಶ್ರೀ ಶ್ರೀ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ಶ್ರೀ ಕಾಗಿನೆಲೆ ಕನಕ ಗುರು ಪೀಠ ರಾಯಚೂರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಾಂತರಾಮ್ ಸಿದ್ದಿ, ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ. ಪಿ. ಹರೀಶ್, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಶ್ರೀ ಡಾ. ಕೆ. ಎಂ. ಮೈತ್ರಿ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ (ರಿ.) ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಶ್ರೀ ಎಂ. ಕೃಷ್ಣಯ್ಯ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಿ.ರಾಜೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

