ದಾವಣಗೆರೆ: ಜಾನುವಾರು ಮೈತೊಳೆಯಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ದಾವಣಗೆರೆ ಹರಿಹರ ತಾಲೂಕಿನ ಧೂಳೆಹೊಳೆ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.

ಇಂಗಳಗೊಂದಿ ಜಯಪ್ಪ (32) ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ನದಿ ನೀರಿನ ಮಟ್ಟ ಹೆಚ್ಚಾಗಿದ್ದನ್ನು ಗಮನಿಸದೆ ಜಯಪ್ಪ ನದಿಗಿಳಿದು ಜಾನುವಾರುಗಳ ಮೈತೊಳೆಯಲು ಮುಂದಾಗಿದ್ದರು. ಇದ್ದಕ್ಕಿದ್ದಂತೆ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಧೂಳೆಹೊಳೆಯಿಂದ 2 ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.