ನವದೆಹಲಿ: ದೆಹಲಿಯಲ್ಲಿ 28 ವರ್ಷದ ಜಿಮ್ ಮಾಲೀಕನನ್ನು ಚಾಕುವಿನಿಂದ 50ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಲಾಗಿದ್ದು, ಅವರ ಭೀಕರ ಕೊಲೆಯ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಅವರು ಕೊಲೆಯಾದ ಕೆಲವು ದಿನಗಳ ನಂತರ, ಪೊಲೀಸ್ ತನಿಖೆಯ ವೇಳೆ ಅವರ ಕೊಲೆಯ ಸಿಸಿಟಿವಿ ದೃಶ್ಯ ಬಹಿರಂಗವಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈಶಾನ್ಯ ದೆಹಲಿಯ ಭಜನ್ಪುರ ಪ್ರದೇಶದ ಗಾಮ್ರಿ ಎಕ್ಸ್ಟೆನ್ಷನಲ್ಲಿರುವ ಸುಮಿತ್ ಚೌಧರಿ ಅಲಿಯಾಸ್ ಪ್ರೇಮ್ ಅವರ ಮನೆಯ ಹೊರಗೆ ಅವರ ಮೇಲೆ ದಾಳಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಅವರು ತಮ್ಮ ಮನೆಯ ಹೊರಗೆ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಾ ನಿಂತಿದ್ದರು. ಆಗ ಜಿಮ್‌ ಮಾಲೀಕ ಬೆಂಚ್‌ ಮೇಲೆ ಕೂತಿದ್ದ ವ್ಯಕ್ತಿಗೆ ಜಾಡಿಸಿ ಒದೆಯುತ್ತಾರೆ. ಆಗ ಇನ್ನೊಬ್ಬ ವ್ಯಕ್ತಿ ಅಲ್ಲಿಗೆ ಬಂದು ಜಿಮ್‌ ಮಾಲೀಕನ ಹೊಟ್ಟೆಗೆ ನಿರಂತರವಾಗಿ ಚಾಕುವಿನಿಂದ ಕ್ರೂರವಾಗಿ ಇರಿದಿದ್ದಾನೆ. ಹಲವಾರು ಬಾರಿ ಇರಿತಕ್ಕೊಳಗಾದ ನಂತರ ಜಿಮ್‌ ಮಾಲೀಕ ಚರಂಡಿಗೆ ಬಿದ್ದಿದ್ದಾರೆ. ಕ್ರೂರ ಹತ್ಯೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸರ ಪ್ರಕಾರ, ಆರೋಪಿ ಸುಮಿತ್ ಅವರ ಮುಖ, ಕುತ್ತಿಗೆ, ಎದೆ ಮತ್ತು ಹೊಟ್ಟೆಗೆ ಆರೋಪಿ ಅನೇಕ ಬಾರಿ ಇರಿದಿದ್ದಾನೆ. ಅವರ ಮುಖದ ಮೇಲೆ 21ಕ್ಕೂ ಹೆಚ್ಚು ಇರಿತದ ಗಾಯಗಳಿವೆ. ಒಟ್ಟು 50ಕ್ಕೂ ಹೆಚ್ಚು ಬಾರಿ ಇರಿಯಲಾಗಿದೆ ಎಂದು ತಿಳಿಸಿದರು. ಘಟನೆಯ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು. ಸಿಸಿಟಿವಿ ಪುರಾವೆಗಳ ಆಧಾರದ ಮೇಲೆ ಘಟನೆಯ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.