ಮುಲ್ಕಿ: ವಾಮಂಜೂರಿನ ತಿರುವೈಲು ಗುತ್ತು, ನವೀನ್ ಚಂದ್ರ ಆಳ್ವ ರವರ ಪುತ್ರ ಯುವ ಉದ್ಯಮಿ ಅಭಿಷೇಕ್ ಆಳ್ವ (25) ಎಂಬವರು ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಅಭಿಷೇಕ್ ಆಳ್ವ, ಬಪ್ಪನಾಡು ಸೇತುವೆ ಬಳಿ ಗುರುವಾರ ಬೆಳಿಗ್ಗೆ ಕಾರು ನಿಲ್ಲಿಸಿ ಶಾಂಭವಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ.
ಪುತ್ರ ರಾತ್ರಿವರೆಗೆ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ತಂದೆ ನವೀನ್ ಚಂದ್ರ ಆಳ್ವ ಪಡುಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಳಿಕ ಹುಡುಕಾಟ ನಡೆಸಿದಾಗ ಮುಲ್ಕಿಯ ಬಪ್ಪನಾಡು ಸೇತುವೆ ಬಳಿ ಕಾರು ಪತ್ತೆಯಾಗಿದೆ.
ಗುರುವಾರ ರಾತ್ರಿ ಶಾಂಭವಿ ನದಿಯಲ್ಲಿ ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಮಂಗಳೂರು ಎಸಿಪಿ ಶ್ರೀಕಾಂತ್, ಮುಲ್ಕಿ ಹಾಗೂ ಪಡುಬಿದ್ರೆ ಪೊಲೀಸರು ಮತ್ತಿತರರು ಮಧ್ಯರಾತ್ರಿವರೆಗೂ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ.
ಮತ್ತೆ ಶುಕ್ರವಾರ ಬೆಳಿಗ್ಗೆ ಸ್ಥಳೀಯರಾದ ಸಚಿನ್ ನಾಯಕ್ ಎಂಬವರು ಬೋಟ್ ಮೂಲಕ ಶೋಧಕಾರ್ಯ ನಡೆಸುತ್ತಿದ್ದಾಗ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರ ಶಾನುಭಾಗರ ಕುದ್ರುಬಳಿ ಮೃತದೇಹ ಪತ್ತೆಯಾಗಿದೆ.
ಕೂಡಲೇ ಸ್ಥಳೀಯ ಮುಳುಗುತಜ್ಞರು, ಈಜುಗಾರರು, ಎನ್ ಡಿ ಆರ್ ಎಫ್ ಸಿಬ್ಬಂದಿ ಸೇರಿ ಮೃತದೇಹವನ್ನು ಮೇಲೆತ್ತಿದ್ದು, ಅಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

