ನೊಯ್ಡಾ: ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಯುವಕನೊಬ್ಬನನ್ನು ಆತನ ಇಬ್ಬರು ಪ್ರೇಯಸಿಯರು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಅಪರಾಧ ಇಡೀ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಸುಳ್ಳು ಹೇಳಿ ಆ ಯುವಕನನ್ನು ಕಬ್ಬಿನ ಗದ್ದೆಗೆ ಕರೆದೊಯ್ದ ಆತನ ಇಬ್ಬರು ಪ್ರೇಯಸಿಯರು ಅಲ್ಲಿ ಚೀನಾ ಟಾರ್ಚ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
3 ದಿನಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಯುವಕನ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಪ್ರಕರಣ ಅಂಬೇಡ್ಕರ್ ನಗರದ ಸಮ್ಮನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಶವವನ್ನು ಗುರುತಿಸಿ ತನಿಖೆ ಸತ್ಯ ಹೊರ ಬಿದ್ದಿದೆ.
ಮೃತ ಯುವಕ ಸಂದೀಪ್ ಚೌಹಾಣ್, ಜಲಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಂಜಾ ಇಸ್ಮಾಯಿಲ್‌ಪುರ ಗ್ರಾಮದ ನಿವಾಸಿಯಾಗಿದ್ದು, ಅದೇ ಗ್ರಾಮದ ಇಬ್ಬರು ಯುವತಿಯರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಪ್ರೀತಿಸುವುದಾಗಿ ತಮ್ಮಿಬ್ಬರನ್ನೂ ನಂಬಿಸಿ, ಮೋಸ ಮಾಡಿರುವುದು ಆ ಯುವತಿಯರಿಗೆ ಗೊತ್ತಾಗಿದೆ. ಅವರಿಬ್ಬರಿಗೂ ಆ ಯುವಕ ಸಂದೀಪ್ ಬ್ಲಾಕ್ಮೇಲ್ ಮಾಡುತ್ತಿದ್ದ. ಇದರಿಂದ ನೊಂದಿದ್ದ ಯುವತಿಯರು ಆತನನ್ನು ಬರ್ಬರವಾಗಿ ಕೊಂದಿದ್ದಾರೆ.

