ನಂಜನಗೂಡು: ನಂಜನಗೂಡಿನಲ್ಲಿ ಮಾರಕಾಸ್ತ್ರಗಳು ಸದ್ದು ಮೊಳಗಿದೆ. ಸಾರ್ವಜನಿಕ ಆಸ್ಪತ್ರೆ ಮುಂಭಾಗ ರಣರಂಗವಾಗಿ ಮಾರ್ಪಟ್ಟಿದೆ. ರಾಡು,ಚಾಕು,ರಿಪೀಸ್ ಪಟ್ಟಿಯಿಂದ ಇಬ್ಬರ ಮೇಲೆ ಅಟ್ಯಾಕ್ ಮಾಡಿದ ಯುವಕರ ತಂಡ ಅಟ್ಟಹಾಸ ಮೆರೆದಿದೆ. ಲಾಂಗ್ ಹಿಡಿದು ಆಸ್ಪತ್ರೆ ಬಳಿ ರಾಜಾರೋಷವಾಗಿ ಓಡಾಡಿದ ನಾಲ್ವರ ಯುವಕರ ಪುಂಡರ ಗುಂಪು ಅಟ್ಯಾಕ್ ಮಾಡಿ ನಂಜನಗೂಡನ್ನೇ ಬೆಚ್ಚಿಬೀಳಿಸಿದ್ದಾರೆ.

ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ ಅಭಿಲಾಷ್ ಹಾಗೂ ರವಿ ಎಂಬುವರ ಮೇಲೆ ದಾಳಿ ನಡೆಸಿದ ಗುಂಪು ರಾಡು, ಚಾಕು, ರಿಪೀಸ್ ಪಟ್ಟಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂಜನಗೂಡಿನ ಸುಭಾಷ್ ಅಲಿಯಾಸ್ ಸುಬ್ಬು, ಆಕಾಶ್ ಅಲಿಯಾಸ್ ಮಿಂಡ್ರಿ, ಸತ್ಯ, ಮಂಟಿ ಎಂಬುವರ ಮೇಲೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಗುಂಪು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದೆ.

ಹಲ್ಲೆಗೊಳಗಾದ ಅಭಿಷೇಕ್ ನಂಜನಗೂಡಿನ ಶ್ರೀರಾಂಪುರದ ಯುವತಿಯನ್ನ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಪತ್ನಿಯ ದೊಡ್ಡಮ್ಮನ ಮಗ ಶಿವಕುಮಾರ್ ಗೆ ಸುಭಾಷ್, ಆಕಾಶ್, ಸತ್ಯ ರವರು ಕಪಿ ಕಪಿ ಎಂದು ಛೇಡಿಸುತ್ತಿದ್ದರು. ಈ ಬಗ್ಗೆ ಶಿವಕುಮಾರ್ ತಾಯಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಮೂವರು ಶಶಿಕುಮಾರ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು.

ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಅಭಿಷೇಕ್ ಪತ್ನಿ ಮನೆಗೆ ಬಂದಾಗ ಶಶಿಕುಮಾರ್ ಅಣ್ಣ ಅನಾರೋಗ್ಯದ ಹಿನ್ನಲೆ ಚಿಕಿತ್ಸೆಗಾಗಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಇದೇ ವೇಳೆ ಹೊಂಚು ಹಾಕಿದ ಸುಭಾಷ್ ತಂಡ ಮಂಟಿ ಯ ಪ್ಯಾಸೆಂಜರ್ ಆಟೋದಲ್ಲಿ ಮಾರಕಾಸ್ತ್ರಗಳ ಸಮೇತ ಬಂದು ಲಾಂಗ್ ಗಳನ್ನ ಹಿಡಿದು ಭೀತಿ ಸೃಷ್ಟಿಸಿ ಅಭಿಷೇಕ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬಿಡಿಸಲು ಬಂದ ಶಶಿಕುಮಾರ್ ಅಣ್ಣ ರವಿ ಮೇಲೂ ಅಟ್ಯಾಕ್ ಮಾಡಿದ್ದಾರೆ.

ಚಾಕು, ಕಬ್ಬಿಣದ ರಾಡ್, ರಿಪೀಸ್ ಪಟ್ಟಿಗಳಿಂದ ಹಲ್ಲೆ ನಡೆಸಿ ರಣರಂಗ ಸೃಷ್ಟಿಮಾಡಿದ್ದಾರೆ. ಇವರಿಂದ ಅಭಿಷೇಕ್ ತಪ್ಪಿಸಿಕೊಂಡು ಓಡಿದ್ರೂ ಚೇಸ್ ಮಾಡಿದ ಆರೋಪಿಗಳು ಹಟ್ಟಿಮಾರಮ್ಮನ ದೇವಸ್ಥಾನದ ಬಳಿ ಹಿಡಿದು ಮತ್ತೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅಭಿಷೇಕ್ ಹಾಗೂ ರವಿ ರವರನ್ನ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.