ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಪತ್ರಕರ್ತರೊಬ್ಬರು ಇಂದು ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ. ಈ ಘಟನೆಯ ನಂತರ ಅವರ ನಿವಾಸದ ಬಳಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ರಕರ್ತನ ಶವ ಪತ್ತೆಯಾಗಿದೆ.
ಮೃತ ಪತ್ರಕರ್ತನ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. ತಮಗೆ ತಮ್ಮ ಗ್ರಾಮದ ಕೆಲವರು ಬೆದರಿಕೆ ಹಾಕಿದ್ದಾರೆ ಮತ್ತು ನಿನ್ನೆ ರಾತ್ರಿ ಫೋನ್ ಕರೆಯನ್ನು ಮಾಡಿದ್ದರು. ಫೋನ್ ಮಾಡಿ ಗೌರವ್ನನ್ನು ಮನೆಯಿಂದ ಹೊರಗೆ ಬರಲು ಸೂಚಿಸಿದ್ದರು. ಆದರೆ, ಆಚೆ ಹೋದವನು ಮತ್ತೆ ಬರಲೇ ಇಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಗೌರವ್ ಕುಶ್ವಾಹ ಒಬ್ಬ ಪತ್ರಕರ್ತನಾಗಿದ್ದು, ಯೂಟ್ಯೂಬ್‌ನಲ್ಲಿ ತನ್ನ ವರದಿಯ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಚಜನ್ ಖರಿರಾರ್ ಗ್ರಾಮದಲ್ಲಿ ಬೆಳಗ್ಗೆ ಮಾವಿನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಫೋರೆನ್ಸಿಕ್ ಸಿಬ್ಬಂದಿ ಅಪರಾಧ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಜಾಫರ್‌ಪುರವು ಹಲವಾರು ಕೊಲೆ, ದರೋಡೆ ಮತ್ತು ಕಳ್ಳತನದ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಇದರಿಂದ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಈ ಬಗ್ಗೆ ವರದಿ ಮಾಡುವ ಪರ್ತರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ.
ಗೌರವ್ ಅವರನ್ನು ಕೆಲವು ಸ್ಥಳೀಯರು ಕೊಂದು ಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ ವ್ಯಕ್ತಿಗೆ ಅಪರಿಚಿತ ಸಂಖ್ಯೆಯಿಂದ ಗೌರವ್ಗೆ ಫೋನ್ ಕರೆ ಬಂದಿತು. ನಂತರ ಅವನು ಸ್ವಲ್ಪ ಸಮಯದ ನಂತರ ಹಿಂತಿರುಗುತ್ತೇನೆ ಎಂದು ಮನೆಯಿಂದ ಹೊರಟುಹೋದನು. ಆದರೆ ಆತ ಮನೆಗೆ ಬರಲಿಲ್ಲ ಎಂದು ಅವರ ತಾಯಿ ಇಂದ್ರಾ ದೇವಿ ಪೊಲೀಸರಿಗೆ ತಿಳಿಸಿದರು.
ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಗೌರವ್ ಶವವನ್ನು ಕಂಡು ಗ್ರಾಮಸ್ಥರು ಬೆಳಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡಿದ್ದು, ಅದರಲ್ಲಿದ್ದ ಮೊಬೈಲ್ ಫೋನ್, ಟವೆಲ್ ಮತ್ತು ಒಂದು ಜೊತೆ ಚಪ್ಪಲಿಯನ್ನು ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.

