ಟಿ. ನರಸೀಪುರ: ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ತಡರಾತ್ರಿ ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಟಿ.ನರಸೀಪುರ ಪಟ್ಟಣದ ಹೊಸ ತಿರುಮಕೂಡಲು ನಿವಾಸಿ ವಿನೋದ್ (40) ಕೊಲೆಯಾದ ವ್ಯಕ್ತಿ. ಪಟ್ಟಣದ ಪ್ರಮುಖ ಸ್ಥಳವಾದ ಪಿಟೀಲು ಚೌಡಯ್ಯ ಸರ್ಕಲ್ ಬಳಿ ಇರುವ ಅಂಡರ್‌ಪಾಸ್‌ನಲ್ಲಿ ಈ ಭೀಕರ ಘಟನೆ ನಡೆದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಟಿ. ನರಸೀಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ಶ್ವಾನ ದಳವನ್ನೂ ಘಟನಾ ಸ್ಥಳಕ್ಕೆ ಕರೆಸಿ, ಪ್ರಮುಖ ಸುಳಿವುಗಳನ್ನು ಸಂಗ್ರಹಿಸುವ ಪ್ರಯತ್ನ ನಡೆದಿದೆ.
ಸದ್ಯ ಮೃತ ವಿನೋದ್ ಅವರ ದೇಹವನ್ನು ಟಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಟಿ. ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

