ಅಸ್ಸಾಂ: ದಿಬ್ರುಗಢದಲ್ಲಿ ಅಪರೂಪದಲ್ಲೇ ಅಪರೂಪದ ಹಲ್ಲಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, 11 ಟೋಕೇ ಗೆಕ್ಕೊಗಳನ್ನು ರಕ್ಷಿಸಿದ್ದಾರೆ.
ಟೋಕೈ ಗೆಕ್ಕೊ ಹಲ್ಲಿಗಳು ಭಾರತದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಆಗ್ನೇಯ ಏಷ್ಯಾದ ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿಗಳು ಒಂದು ಹಲ್ಲಿಗೆ 60 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಬಂಧಿತರನ್ನು ದೇಬಾಶಿಶ್ ದೊಹುಟಿಯಾ (34), ಮನಶ್ ದೊಹುಟಿಯಾ (28) ಮತ್ತು ದೀಪಂಕರ್ ಘರ್ಫಾಲಿಯಾ (40) ಎಂದು ಗುರುತಿಸಲಾಗಿದೆ. ವಿಚಾರಣೆಯ ವೇಳೆ ಆರೋಪಿಗಳು ಅರುಣಾಚಲ ಪ್ರದೇಶದಿಂದ ತರಲಾಗಿದೆ ಎಂದು ತಪ್ಪೊಪ್ಪಿಕೊಂದಿದ್ದಾರೆ.
ದಿಬ್ರುಗಢದಲ್ಲಿ ಟೋಕೇ ಗೆಕ್ಕೊ ಹಲ್ಲಿಗಳ ಕಳ್ಳಸಾಗಣೆ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ 11 ಅಪರೂಪದ ಹಲ್ಲಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಗೆಕ್ಕೊಗಳನ್ನು ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

