ಬೆಂಗಳೂರು: ಕಾಲೇಜು ಮುಂಭಾಗವೇ ಮತ್ತು ಬರುವ ಎಂಬ ಮಾತ್ರೆಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಯುವಕನನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿನ್ನಿ ಮೀಲ್‌ ರಸ್ತೆ ನಿವಾಸಿ ಪ್ರೇಮ್‌ ಅಲಿಯಾಸ್‌ ವೈಷ್ಣವ್‌ (27) ಬಂಧಿತ ಆರೋಪಿ. ಈತನಿಂದ 40 ಲಕ್ಷ ರೂ. ಮೌಲ್ಯದ 6700 ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಆನ್‌ಲೈನ್‌ ಮೂಲಕ ಡೆಪೆಂಡಾಲ್‌ ಎಂಬ ಮಾತ್ರೆಗಳನ್ನು ತರಿಸಿಕೊಂಡು ಮನೆಯಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. ಇದರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಮಾಲು ಸಮೇತ ಬಂಧಿಸಲಾಗಿದೆ.

ಆರೋಪಿ ಕಾಲೇಜು ಮುಂಭಾಗವೇ ಸಾರ್ವಜನಿಕವಾಗಿ ಪ್ರತಿ ಮಾತ್ರೆಗೆ 200 ರೂ.ನಿಂದ 500 ರೂ.ವರೆಗೆ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಮಾಹಿತಿಯನ್ನು ಔಷಧ ನಿಯಂತ್ರಣ ವಿಭಾಗದ ಅಧಿಕಾರಿಗಳಿಗೆ ತಿಳಿಸಿದ್ದು, ಅವರೊಂದಿಗೆ ತನಿಖೆ ನಡೆಸಲಾಗುತ್ತದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌ ಎಂ.ಹಾಕೆ ತಿಳಿಸಿದ್ದಾರೆ.