ಚಾಮರಾಜನಗರ: ಹೂತಿಟ್ಟಿದ್ದ ಶವದಿಂದ ಮುಂಗೈ ಹೊರಬಂದು ಎಲ್ಲರನ್ನೂ ಹೌಹಾರುವಂತೆ ಮಾಡಿದ್ದ ಪ್ರಕರಣದಲ್ಲಿ ಮಹಿಳೆ ಗುರುತು ಪತ್ತೆಯಾಗುವ ಜೊತೆಗೆ ಕೊಲೆ ಮಾಡಿದ ಪ್ರಿಯಕರನೂ ಸಿಕ್ಕಿ ಹಾಕಿಕೊಂಡಿದ್ದಾನೆ.
ಸೋದರ ಮಾವನನ್ನು ಮದುವೆಯಾಗಿದ್ದರೂ ವಿವಾಹ ಸಂಬಂಧದಲ್ಲಿ ವೈ ಮನಸ್ಸು ಮೂಡಿ ಆಗಾಗ್ಗೆ ಮನೆ ಬಿಟ್ಟು ಹೋಗುತ್ತಿದ್ದ ಮಹಿಳೆಯನ್ನು ಪ್ರಿಯಕರನೇ ಶಾಶ್ವತವಾಗಿ ಮಣ್ಣು ಮಾಡಿ ಕೊನೆಗೇ ಪೊಲೀಸರ ಕೈಲಿ ತಗ್ಲಾಕಿಕೊಂಡಿದ್ದಾನೆ.
ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದ ಸುವರ್ಣಾವತಿ ನದಿ ದಂಡೆಯಲ್ಲಿ ಗುರುವಾರ ರಾತ್ರಿ ಶವದ ಮುಂಗೈ ಕಾಣಿಸಿಕೊಂಡ ಪ್ರಕರಣದಲ್ಲಿ ಮೃತಪಟ್ಟವಳ ಗುರುತು ಪತ್ತೆಯಾಗಿದೆ. ಕೊಳ್ಳೇಗಾಲ ತಾಲೂಕಿನ ಕೊಳ್ಳೇಗಾಲ ಮೋಳೆ ಗ್ರಾಮದ ಸೋನಾಕ್ಷಿ(29) ಎಂಬಾಕೆ ಅಸುನೀಗಿದ್ದು ಈಕೆಯನ್ನು ಪ್ರಿಯಕರನೇ ಕೊಲೆ ಮಾಡಿ ಹೂತಿದ್ದಾನೆ.
ಇದೇ ರೀತಿ ಕಳೆದ 12 ರಂದು ಮನೆ ಬಿಟ್ಟು ಹೋಗಿ ಬಳಿಕ ಈಕೆಯನ್ನು ಸಿಡಿಆರ್ ಮೂಲಕ ಪತ್ತೆ ಹಚ್ಚಿದ್ದರು. ಅದೇ ಗ್ರಾಮದ ಮಾದೇಶ್(35) ಎಂಬಾತನ ಜೊತೆಗೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದ ಸೋನಾಕ್ಷಿ ತಾನು ಮನೆ ಬಿಟ್ಟು ಹೋದರೂ ಮತ್ತೆ ಪೊಲೀಸರ ಕೈಗೆ ಸಿಗಲು ಮಾದೇಶನೇ ಕಾರಣ ಎಂದು ವರಾತ ತೆಗೆದಿದ್ದಳು.
ಮಾದೇಶನೇ ತಾನಿರುವ ಬಗ್ಗೆ ಪೊಲೀಸರ ಬಳಿ ಹೇಳಿದ್ದಾನೆ ಎಂದು ವರಾತ ತೆಗೆದು ಕಲಹ ಉಂಟಾದ ವೇಳೆ ಗೋಡೆಗೆ ತಲೆಯನ್ನು ದೂಕಿ ಪ್ರಿಯಕರ ಮಾದೇಶನೇ ಕೊಲೆ ಮಾಡಿದ್ದು ತನಿಖೆಯಲ್ಲಿ ಗೊತ್ತಾಗಿದೆ. ಬಳಿಕ, ಬೈಕ್ ಲ್ಲಿ ಸೋನಾಕ್ಷಿ ಶವವನ್ನು ಹಳೇ ಹಂಪಾಪುರದ ನದಿ ದಂಡೆಯಲ್ಲಿ ಹೂತಿದ್ದಾಗಿ ಬಾಯ್ಬಿಟ್ಟಿದ್ದಾನೆ ಪ್ರಿಯಕರ ಮಾದೇಶ. ನದಿದಂಡೆಯಲ್ಲಿ ಶವ ಸಿಕ್ಕ ಪ್ರಕರಣದಲ್ಲಿ ಪ್ರಿಯಕರನೇ ಕೊಲೆ ಮಾಡಿ ಮಹಿಳೆಯನ್ನು ಮಣ್ಣು ಮಾಡಿದ ಘಟನೆ ಬಯಲಾಗಿದೆ.

