ಸಾಲಿಗ್ರಾಮ: ಟೀ ಅಂಗಡಿ ಪ್ರವೇಶಿಸುತ್ತಿದ್ದ ಖಾಸಗಿ ಚಾನೆಲ್ ವರದಿಗಾರನ ಮೇಲೆ 7-8 ಮುಸ್ಲಿಂ ಯುವಕರ ತಂಡ ಹಿಂಬಾಲಿಸಿ ಬಂದು ಹಿಗ್ಗ ಮುಗ್ಗ ಹಲ್ಲೆ ನಡೆಸಿದ ಪ್ರಕರಣ ಕೆ.ಆರ್.ನಗರ ತಾಲೂಕು ಸಾಲಿಗ್ರಾಮದಲ್ಲಿ ನಡೆದಿದೆ.

ರಣರಂಗ ಟಿವಿ ವರದಿಗಾರ ಬ್ರಿಜೇಶ್ ಎಂಬುವರ ಮೇಲೆ ಹಲ್ಲೆ ನಡೆದಿದ್ದು ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ನಡೆದು 5 ದಿನಗಳು ಕಳೆದರೂ ಸಾಲಿಗ್ರಾಮ ಪೊಲೀಸರು ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆಂದು ಹಲ್ಲೆಗೊಳಗಾದ ಬ್ರಿಜೇಶ್ ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಾಲಿಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡ್ ಅಕ್ರಮವಾಗಿ ಒಡೆದು ಹಾಕಿದ ಮುಸ್ಲಿಂ ಯುವಕರು ದಾರಿ ಮಾಡಿಕೊಂಡಿದ್ದರು. ಈ ಬಗ್ಗೆ ಬ್ರಿಜೇಶ್ ಸ್ಥಳಕ್ಕೆ ತೆರಳಿ ವರದಿ ಮಾಡಿದ್ದರು. ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಕಾಂಪೌಂಡ್ ಒಡೆದು ಹಾಕಿದವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿತ್ತು.

ಈ ವಿಚಾರದಲ್ಲಿ ಕಾಂಪೌಂಡ್ ಒಡೆದುಹಾಕಿದ ಯುವಕರು ಬ್ರಿಜೇಶ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದರೆಂದು ಹೇಳಲಾಗಿದೆ. ಅಕ್ಟೋಬರ್ 20 ರಂದು ಸಾಲಿಗ್ರಾಮದ ನಾಲೆಯಲ್ಲಿ ಈಜಲು ತೆರಳಿದ್ದ ಬಾಲಕರು ಮುಳುಗಿ ಮೃತಪಟ್ಟಿದ್ದ ಘಟನೆ ಬಗ್ಗೆ ಮಾಹಿತಿ ಪಡೆಯಲು ಬ್ರಿಜೇಶ್ ಚುಂಚನಕಟ್ಟೆ ನರಸಿಂಹ ದೇವಸ್ಥಾನದ ಬಳಿ ಪೊಲೀಸ್ ಪೇದೆಯೊಬ್ಬರ ಜೊತೆ ಮಾತನಾಡುತ್ತ ಟೀ ಅಂಗಡಿಗೆ ಪ್ರವೇಶಿಸಿದ್ದಾರೆ.

ಹಿಂಬಾಲಿಸಿಕೊಂಡು ಬಂದ ತಂಡ ಏಕಾ ಏಕಿ ದಾಳಿ ನಡೆಸಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.ಬ್ರಿಜೇಶ್ ಬಳಿ ಇದ್ದ 25 ಸಾವಿರ ಕ್ಯಾಶ್ ಹಾಗೂ ಕತ್ತಿನಲ್ಲಿದ್ದ ಚಿನ್ನದ ಚೈನ್, ಕಿವಿ ಓಲೆ, ಲಾಕೆಟ್ ಕಸಿದುಕೊಂಡು ಪರಾರಿಯಾಗಿದ್ದಾರೆಂದು ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿಗೆ ಸ್ಪಂದಿಸದ ಪೊಲೀಸರು ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆಂದು ಬ್ರಿಜೇಶ್ ಆರೋಪಿಸಿದ್ದಾರೆ.

ಕನಿಷ್ಟಪಕ್ಷ ಎನ್ ಸಿ ಆರ್ ಸಹ ನೀಡುತ್ತಿಲ್ಲವೆಂದು ದೂರಿದ್ದಾರೆ.ಹಲ್ಲೆಗೊಳಗಾದ ಬ್ರಿಜೇಶ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಿಂದ ಎಂಎಲ್ ಸಿ ಠಾಣೆಗೆ ರವಾನೆ ಆಗಿದ್ದರೂ ಪ್ರಕರಣ ದಾಖಲಿಸಲು ಮೀನಾ ಮೇಷ ಎಣಿಸುತ್ತಿರುವ ಕಾರಣ ಏನು ಗೊತ್ತಿಲ್ಲ. ಜಾವಿದ್,ಕರ್ಮ,ಹಾಕಿಬ್ ಎಂಬುವರ ಜೊತೆ ಇನ್ನಿತರ ಯುವಕರು ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಇತ್ತ ಗಮನ ಹರಿಸಿ ಹಲ್ಲೆ ನಡೆಸಿದ ಯುವಕರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.