ಅಮೆರಿಕ : ಫರ್ಟಿಲಿಟಿ ಚಿಕಿತ್ಸಾ ಕೇಂದ್ರವೊಂದರ ಎದುರು ಶಕ್ತಿ ಶಾಲಿ ಬಾಂಬ್ ಸ್ಫೋಟಿಸಿರುವ ಘಟನೆ ಕ್ಯಾಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ ನಲ್ಲಿ ನಡೆದಿದೆ. ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.
ಇದು ಭಯೋತ್ಪಾದಕರ ಕೃತ್ಯ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ ಖಚಿತಪಡಿಸಿದೆ. ದೊಡ್ಡಮಟ್ಟದಲ್ಲಿ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ಕೃತ್ಯದಲ್ಲಿ ಸ್ಥಳೀಯ ಅಥವಾ ಅಂತಾರಾಷ್ಟ್ರೀಯ ಉಗ್ರರ ಕೈವಾಡದ ಬಗ್ಗೆ ಪತ್ತೆ ಹಚ್ಚುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಲಾಸ್ ಏಂಜಲೀಸ್ ನ ಎಫ್‌ಬಿಐ ಮುಖ್ಯ ಕಚೇರಿಯ ಅಧಿಕಾರಿ ಅಕಿಲ್ ಡೇವಿಸ್ ಪ್ರತಿಕ್ರಿಯಿಸಿ, ಇದೊಂದು ಉದ್ದೇಶಪೂರ್ವಕವಾಗಿ ನಡಸಿರುವ ಕೃತ್ಯ ಎಂದು ಖಚಿತವಾಗಿದೆ. ಇದು ಭಯೋತ್ಪಾದಕರ ಕೃತ್ಯ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ ಎಂದಿದ್ದಾರೆ.
ಸ್ಥಳೀಯ ಕಾಲಮಾನ ರಾತ್ರಿ ಒಂದು ಗಂಟೆಯ ಸುಮಾರಿಗೆ ನಡೆದ ಈ ಸ್ಪೋಟದಲ್ಲಿ ಆಸ್ಪತ್ರೆಯ ಕಟ್ಟಡವೂ ಜಖಂಗೊಂಡಿದೆ. ಸ್ಫೋಟದಲ್ಲಿ ಸಾವನ್ನಪ್ಪಿರುವ ವ್ಯಕ್ತಿ ಆರೋಪಿಯಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

