ಬಂಟ್ವಾಳ : ಪಾಣೆಮಂಗಳೂರು ಶ್ಮಶಾನ ರಸ್ತೆಯ ಬಳಿ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ಆಟೋದಲ್ಲಿ ಮಾದಕ ವಸ್ತು (ಎಂ.ಡಿ.ಎಂ.ಎ) ಇರಿಸಿಕೊಂಡಿದ್ದ ಓರ್ವ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಿಕ್ಷಾ ಚಾಲಕ ಮೊಹಮ್ಮದ್ ಇಮ್ತಿಯಾಜ್(40) ಎಂದು ಗುರುತಿಸಲಾಗಿದೆ. ಪಾಣೆಮಂಗಳೂರು ಶ್ಮಶಾನದ ಪಕ್ಕದಲ್ಲಿ ನಿಲ್ಲಿಸಿದ್ದ ಕೆಎ-19-ಡಿ-1806 ನೇ ನಂಬರಿನ ಆಟೋ ರಿಕ್ಷಾದ ಚಾಲಕ ಸೀಟಿನಲ್ಲಿ ಸಂಶಯಾಸ್ಪದವಾಗಿ ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ, ಕೃತ್ಯ ಬೆಳಕಿಗೆ ಬಂದಿದೆ.
ಪೊಲೀಸ್ ವಿಚಾರಣೆ ವೇಳೆ ಆತ, ತನ್ನ ಬಳಿ ಎಂ.ಡಿ.ಎಂ.ಎ ಇರುವುದಾಗಿ ಹಾಗೂ ಅದನ್ನು ಸೇವಿಸಲು ಸ್ಥಳಕ್ಕೆ ಬಂದಿರುವುದಾಗಿ ಹೇಳಿದ್ದಾನೆ. ಪೊಲೀಸರಿಗೆ 0.760 ಗ್ರಾಂ (760 ಮಿಲಿಗ್ರಾಂ) ಪ್ರಮಾಣದ ಎಂ.ಡಿ.ಎಂ.ಎ ಸಿಕ್ಕಿದ್ದು, ಅದರ ಒಂದು ಸಾವಿರ ರೂ.ಎಂದು ತಿಳಿಸಲಾಗಿದೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

