ಬೆಂಗಳೂರು: ಹೆತ್ತ ತಾಯಿಯನ್ನೇ ಮಗಳು ಹತ್ಯೆಗೈದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 46 ವರ್ಷದ ಜಯಲಕ್ಷ್ಮೀ ಮೃತ ತಾಯಿ. ಬೊಮ್ಮನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.

ಕಳೆದ ಎರಡು ದಿನಗಳ ಈ ಹಿಂದೆಯೇ ಈ ದುರ್ಘಟನೆ ಸಂಭವಿಸಿದೆ. ಪವಿತ್ರಾ ಎಂಬಾಕೆ ತನ್ನ ಪ್ರಿಯಕರ ನವನೀಶ್​​ ಎಂಬುವನ ಜೊತೆ ಸೇರಿ ತಾಯಿಯ ಜೀವವನ್ನೇ ತೆಗೆದು ಹಾಕಿದ್ದಾಳೆ. ಜಯಲಕ್ಷ್ಮೀ ಅವರು ದಿನಸಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಇವರ ಮಗಳು ಪವಿತ್ರಾ ನವನೀಶ್​ ಎಂಬುವನ ಜೊತೆ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಆತನನ್ನು ಮನೆ ಕರೆಸಿಕೊಂಡು ಮಲಗಿದ್ದಳು. ಈ ಬಗ್ಗೆ ತಾಯಿ ಪ್ರಶ್ನೆ ಮಾಡಿದ್ದಕ್ಕೆ ತಾಯಿಯನ್ನ ಕತ್ತು ಹಿಸುಕಿ ಜೀವ ತೆಗೆದಿದ್ದಾರೆ.

ಪವಿತ್ರಾ ನವನೀಶ್​​ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದನ್ನು ಪ್ರಶ್ನಿಸಿದ್ದ ಕಾರಣ ತಾಯಿಯ ಜೀವ ತೆಗೆದಿದ್ದಾರೆ. ಇಷ್ಟೇ ಅಲ್ಲ, ಇದರಿಂದ ತಪ್ಪಿಸಿಕೊಳ್ಳಲು ಈಕೆಯೇ ನಾಟಕ ಮಾಡಿದ್ದಳು. ನನ್ನ ತಾಯಿ ಬಾತ್ ರೂಮ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮಗಳು ಪೊಲೀಸರಿಗೆ ಮಾಹಿತಿ ನೀಡಿದ್ದಳು. ಆದರೆ ಮೃತದೇಹ ನೋಡಿದಾಗಲೇ ಪೊಲೀಸರಿಗೆ ಅನುಮಾನ ಮೂಡಿದೆ.

ಪೋಸ್ಟ್ ಮಾರ್ಟಮ್ ವರದಿಯಲ್ಲಿ ಮಹಿಳೆ ಸಾವು ಕೊಲೆ ಅನ್ನೋದು ಖಚಿತವಾಗಿದೆ. ನಂತರ ಪಾಪಿ ಮಗಳ ವಿಚಾರಣೆ ನಡೆಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಪವಿತ್ರ ಹಾಗೂ ಆಕೆಯ ಪ್ರಿಯಕರ ಲವಲೀಶ್‌ ಅನ್ನು ಬೊಮ್ಮನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.