ನಂಜನಗೂಡು: ತಾಯಿ ಮತ್ತು ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸಾವಿಗೆ ನ್ಯಾಯ ಕೇಳಲು ಹೋದ ಗ್ರಾಮಸ್ಥರ ಜೊತೆ ಪೊಲೀಸರು ಸಂಯಮದಿಂದ ವರ್ತಿಸಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ತಾಯಿ ಜಯಲಕ್ಷ್ಮಿ ( 45) ಮಗಳು ಪ್ರಿಯಾ (20) ಮೃತ ದುರ್ದೈವಿಗಳು. 22 ವರ್ಷಗಳ ಹಿಂದೆ ಜಯಲಕ್ಷ್ಮಿ ಯನ್ನು ಮದುವೆ ಆಗಿದ್ದ ಕೊತ್ತನಹಳ್ಳಿ ಜಯರಾಮ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ತಾಯಿ ಮತ್ತು ಮಗಳು ಮನೆಯ ತಂಬಾಕು ಬೇಯಿಸುವ ಬ್ಯಾರೆನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರ ಸಾವಿನಲ್ಲಿ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಯೂಡಿಆರ್ ಪ್ರಕರಣ ದಾಖಲಾಗಿದೆ.

