ಸಾಹಿಬ್​ಗಂಜ್ : ವಿವಿಧ ಪ್ರಭೇದದ 1000ಕ್ಕೂ ಹೆಚ್ಚು ಜೀವಂತ ಆಮೆಗಳನ್ನು ರೈಲಿನ ಮೂಲಕ ಕಳ್ಳ ಸಾಗಣೆ ಮಾಡಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ.

ನಿಷೇಧಿತ ವನ್ಯಜೀವಿ ಪ್ರಭೇದಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ತನಿಖೆ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಆರ್‌ಪಿಎಫ್ ಬರ್ಹರ್ವಾ ನಿಲ್ದಾಣದಲ್ಲಿ ನಿಯಮಿತ ತಪಾಸಣೆ ನಡೆಸುತ್ತಿದ್ದಾಗ ಫರಕ್ಕಾ ಎಕ್ಸ್‌ಪ್ರೆಸ್ (15744) ರೈಲಿನಲ್ಲಿ ವಿವಿಧ ಗಾತ್ರದ ಸಾವಿರಕ್ಕೂ ಹೆಚ್ಚು ಸಂರಕ್ಷಿತ ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಮೆಗಳನ್ನು 22 ಚೀಲಗಳಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಆರ್‌ಪಿಎಫ್ ಕಾರ್ಯಾಚರಣೆಯ ಸಮಯದಲ್ಲಿ ಕೆಲವು ಕಳ್ಳಸಾಗಣೆದಾರರು ತಪ್ಪಿಸಿಕೊಂಡಿದ್ದಾರೆ. ಬಂಧಿತರನ್ನು ಕರಣ್ ಪಾಠ್ಕರ್ (25), ಮಂಜು ಪಾಠ್ಕರ್ (30) ಮತ್ತು ಉಷಾ ಪಾಠ್ಕರ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.

ಈ ಆಮೆಗಳನ್ನು ವಾರಣಾಸಿ ನಿಲ್ದಾಣದಿಂದ ಫರಕ್ಕಾಗೆ ಕೊಂಡೊಯ್ಯಲಾಗುತ್ತಿತ್ತು ಎಂದು ವಿಚಾರಣೆ ವೇಳೆ ಆರೋಪಿಗಳು ತಿಳಿಸಿರುವ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನವದೆಹಲಿಯಿಂದ ಫರಕ್ಕಾಗೆ ಚಲಿಸುತ್ತಿದ್ದ ರೈಲು ಬರ್ಹರ್ವಾ ನಿಲ್ದಾಣಕ್ಕೆ ಬೆಳಗ್ಗೆ 8.15ಕ್ಕೆ ಬರಬೇಕಿತ್ತು. ಆದರೆ, ವಿಳಂಬದಿಂದಾಗಿ ಸಂಜೆ 5ಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಆರ್‌ಪಿಎಫ್ ಸಿಬ್ಬಂದಿ ರೈಲಿನಲ್ಲಿ ಶೋಧ ನಡೆಸುವಾಗ ಈ ಆಮೆಗಳು ಪತ್ತೆಯಾಗಿವೆ. ಇದೀಗ ಎಲ್ಲಾ ಆಮೆಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಸಂಜೀವ್ ಕುಮಾರ್, ವನ್ಯ ಜೀವಿಗಳ ಕಳ್ಳಸಾಗಣೆ ಮೂಲಕ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನಿಗೆ ಈ ಆಮೆಗಳನ್ನು ಫರಕ್ಕಾಗೆ ಸಾಗಿಸಲು ಸೂಚನೆ ನೀಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕಳ್ಳಸಾಗಣೆದಾರರು ಇಷ್ಟು ದೊಡ್ಡ ಪ್ರಮಾಣದ ಆಮೆಗಳನ್ನು ಎಲ್ಲಿಂದ ಪಡೆದರು. ಯಾರ ರಕ್ಷಣೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು ಎಂಬುದರ ಕುರಿತು ತನಿಖೆ ಸಾಗಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಆಮೆಗಳನ್ನು ಗಂಗಾ ನದಿಗೆ ಸುರಕ್ಷಿತವಾಗಿ ಬಿಡಲಾಗುವುದು ಎಂದು ತಿಳಿಸಿದರು.