ಮೂಡಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ತರಗತಿಗೆ ನುಗ್ಗಿ ವಿದ್ಯಾರ್ಥಿಯೋರ್ವ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದಿರುವ ಘಟನೆಯೊಂದು ನಡೆದಿದೆ. ಪ್ರೇಮ ವೈಫಲ್ಯದಿಂದ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.

ತುಮಕೂರು ಮೂಲದವರಾದ ಮಂಜುನಾಥ್ ಹಾಗೂ ಯುವತಿ ಪಿಯುಸಿ ತನಕ ಜೊತೆಯಾಗಿ ವಿದ್ಯಾಭ್ಯಾಸ ನಡೆಸಿದ್ದರು ಎನ್ನಲಾಗಿದೆ. ಬಳಿಕ ಯುವಕ ಕಾಲೇಜು ತೊರೆದಿದ್ದು, ಹುಡುಗಿ ಕಾಲೇಜು ಸೇರ್ಪಡಯಾಗಿದ್ದಳು. ಪಿಯುಸಿ ವರೆಗೆ ಜೊತೆಯಾಗಿದ್ದ ಇವರ ನಡುವೆ ಪ್ರೇಮವಿತ್ತು ಎನ್ನಲಾಗಿದೆ. ಆದರೆ, ಈ ವಿಚಾರವಾಗಿ ಗೊತ್ತಾಗಿ ವಿದ್ಯಾರ್ಥಿನಿಯ ಮನೆಯವರು ಆಕೆಯ ಬಳಿಯಿದ್ದ ಮೊಬೈಲ್ ವಾಪಸ್ ಪಡೆದಿದ್ದರು.

ಇದರಿಂದ ವಿದ್ಯಾರ್ಥಿನಿ ಜೊತೆ ಆರೋಪಿಗೆ ಮಾತನಾಡಲು ಆಗಲಿಲ್ಲ. ಅಲ್ಲದೇ ಆತನ ಕರೆಗಳನ್ನು ಆಕೆ ನಿರಾಕರಿಸುತ್ತಿದ್ದಳು. ಹೀಗಾಗಿ ಕುಪಿತನಾದ ಆರೋಪಿ ಎರಡು ದಿನಗಳ ಹಿಂದಷ್ಟೇ ಮೂಡುಬಿದಿರೆಗೆ ಆಗಮಿಸಿ ಲಾಡ್ಜ್ ನಲ್ಲಿ ತಂಗಿದ್ದು, ಆಕೆಯ ಭೇಟಿಗೆ ಮುಂದಾಗಿದ್ದಾನೆ. ಸಾಧ್ಯವಾಗದೇ ಹೋದಾಗ ಸೋಮವಾರ ಬೆಳಗ್ಗೆ ಕಾಲೇಜಿಗೆ ತೆರಳಿ ಹುಡುಗಿ ಇದ್ದ ತರಗತಿಗೆ ನುಗ್ಗಿ ಕತ್ತರಿಯಲ್ಲಿ ಇರಿದಿದ್ದಾನೆ ಎಂದು ತಿಳಿದು ಬಂದಿದೆ.

ಕೂಡಲೇ ಅಲ್ಲಿದ್ದ ಇತರೆ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು, ಆರೋಪಿ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಸದ್ಯ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.