ಮೈಸೂರು: ಒಂದು ಮದುವೆ ಆಗಿದ್ದರೂ ಯುವತಿಯೊಬ್ಬಳನ್ನ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ ಪ್ರೇಯಸಿಯನ್ನ ಎರಡನೇ ಮಹಡಿಯಿಂದ ತಳ್ಳಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.
ಎರಡನೇ ಮಹಡಿಯಿಂದ ಕೆಳಬಿದ್ದ ಯುವತಿ ತೀವ್ರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಭಂಧ ಪ್ರಿಯಕರ ಆಲ್ಬರ್ಟ್, ಈತನ ತಮ್ಮ ಗೋಕುಲ್ ಹಾಗೂ ಪತ್ನಿ ಸುಭಿತ ಮೇಲೆ ಯುವತಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನೊಂದ ಯುವತಿ ಹಾಗೂ ಆಲ್ಬರ್ಟ್ ಬೆಂಗಳೂರಿನ ಕಾರ್ ಶೋರೂಂ ನಲ್ಲಿ ಸಹದ್ಯೋಗಿಗಳು. ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದೆ ಆಲ್ಬರ್ಟ್ ಮೈಸೂರಿನಲ್ಲಿ ನೆಲೆಸಿದ್ದು ಖಾಸಗಿ ಕಾರ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ. 4 ತಿಂಗಳ ಹಿಂದೆ ಪ್ರೇಯಸಿಯನ್ನೂ ಸಹ ಮೈಸೂರಿಗೆ ಕರೆಸಿಕೊಂಡು ವಿಜಯನಗರದಲ್ಲಿ ಮನೆ ಮಾಡಿ ಇರಿಸಿದ್ದ.
ವಿವಾಹಿತನಾಗಿದ್ದ ಆಲ್ಬರ್ಟ್ ತನಗೂ ಹಾಗೂ ಪತ್ನಿ ನಡುವಿನ ವೈವಾಹಿಕ ಜೀವನ ಸರಿ ಇಲ್ಲ,ಡೈವೋರ್ಸ್ ಕೊಡುತ್ತಿದ್ದೇನೆ ನಂತರ ನಿನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿದ್ದ. ಕಳೆದ ನಾಲ್ಕಾರು ದಿನಗಳಿಂದ ಆಲ್ಬರ್ಟ್ ಮನೆಗೆ ಬಂದಿರಲಿಲ್ಲ.ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿತ್ತು. ಆಲ್ಬರ್ಟ್ ಕೆಲಸ ಮಾಡುತ್ತಿದ್ದ ಕಾರ್ ಶೋರೂಂ ಗೆ ಹೋಗಿ ಪರಿಶೀಲಿಸಿದಾಗ ಬಂದಿರಲಿಲ್ಲ.
ನೇರವಾಗಿ ದಟ್ಟಗಳ್ಳಿಯಲ್ಲಿದ್ದ ಆಲ್ಬರ್ಟ್ ಮನೆಗೆ ಯುವತಿ ತೆರಳಿದಾಗ ಪತ್ನಿ ಸುಭಿತ ಎದುರಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಆಲ್ಬರ್ಟ್ ತಮ್ಮ ಗೋಕುಲ್ ಸಹ ಬಂದು ಯುವತಿಗೆ ನಿಂದಿಸಿದ್ದಾರೆ. ಇದೇ ವೇಳೆ ಬಂದ ಆಲ್ಬರ್ಟ್ ಮಹಡಿಯಿಂದ ಕೆಳಗೆ ತಳ್ಳುವಂತೆ ಗೋಕುಲ್ ಗೆ ಸೂಚಿಸಿದ್ದಾನೆ. ಆಲ್ಬರ್ಟ್ ಸಹ ಎರಡನೇ ಮಹಡಿ ತಲುಪಿ ಇಬ್ಬರೂ ಸೇರಿ ಯುವತಿಯನ್ನ ಕೆಳಗೆ ತಳ್ಳಿದ್ದಾರೆ.
ಘಟನೆಯಲ್ಲಿ ತೀವ್ರ ಗಾಯಗೊಂಡ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನನ್ನು ಕೊಲೆ ಮಾಡುವು ಉದ್ದೇಶದಿಂದ ಮಹಡಿಯಿಂದ ಕೆಳಗೆ ತಳ್ಳಿದ್ದಾರೆಂದು ಆರೋಪಿಸಿ ಯುವತಿ ಆಲ್ಬರ್ಟ್ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

