ಬಂಟ್ವಾಳ: ನಾಲ್ವರ ತಂಡವೊಂದು ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಗಾಯಗೊಂಡ ಯುವಕನನ್ನು ಅಕ್ಕರಂಗಡಿ ನಿವಾಸಿ ಹಮೀದ್ ಯಾನೆ ಅಮ್ಮಿ ಎಂದು ಗುರುತಿಸಲಾಗಿದೆ. ಹಮೀದ್ ಅವರು ಪೈಂಟಿಂಗ್ ವೃತ್ತಿ ನಿರ್ವಹಿಸುತ್ತಿದ್ದರು. ಹಮೀದ್ ಅವರು ರಸ್ತೆ ಬದಿ ನಿಂತಿದ್ದ ವೇಳೆ ಬೈಕಿನಲ್ಲಿ ಬಂದ ನಾಲ್ವರ ತಂಡ ದಾಳಿ ನಡೆಸಿದೆ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿರುವ ಹಮೀದ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

